ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಟ್ರೇಲಿಯಾದ ಸಿಡ್ನಿಯ(Sydney) ಕ್ಯುಡೋಸ್ ಬ್ಯಾಂಕ್ ಅರೆನಾದಲ್ಲಿ ಎಲ್ಲೆಡೆ ‘ಭಾರತ್ ಮಾತಾ ಕಿ ಜೈ’ ಘೋಷಣೆ ಮೊಳಗುತ್ತಿದ್ದು, ಪ್ರಧಾನಿ ಮೋದಿಯವರನ್ನು ಬರ ಮಾಡಿಕೊಂಡ ಆಸ್ಟ್ರೇಲಿಯಾದ ಪ್ರಧಾನಿ,ಈ ವೇದಿಕೆಯಲ್ಲಿ ನಾನು ಕೊನೆಯ ಬಾರಿಗೆ ನೋಡಿದ್ದು ಬ್ರೂಸ್ ಸ್ಪ್ರಿಂಗ್ಸ್ಟೀನ್ ಅವರನ್ನು. ಅವರಿಗೆ ಪ್ರಧಾನಿ ಮೋದಿಗೆ ಸಿಕ್ಕಿದ ಸ್ವಾಗತ ಸಿಗಲಿಲ್ಲ. ಪ್ರಧಾನಿ ಮೋದಿಯೇ ಬಾಸ್ ಎಂದು ಹೇಳಿ ಸ್ವಾಗತ ಕೋರಿದ್ದಾರೆ.
ಇದು ಎಂಥಾ ಗೌರವ! ಎಂದು ಉದ್ಗರಿಸಿದ ಆಂಥೋನಿ ಅಲ್ಬನೀಸ್, ಇಷ್ಟು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದಕ್ಕಾಗಿ ಪ್ರೇಕ್ಷಕರಿಗೆ ಧನ್ಯವಾದ ಅರ್ಪಿಸಿದರು. ಇಷ್ಟು ದೊಡ್ಡ ಕೂಟದಲ್ಲಿ ಅಂತಹ ಆತ್ಮೀಯತೆ ಮತ್ತು ಸಕಾರಾತ್ಮಕತೆಯನ್ನು ನಾನು ನೋಡಿಲ್ಲ ಎಂದು ಅವರು ಹೇಳಿದರು.
ಧನ್ಯವಾದಗಳು, ನೀವು ಆಸ್ಟ್ರೇಲಿಯಾಕ್ಕೆ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವದ ಚೈತನ್ಯವನ್ನು ತಂದಿದ್ದೀರಿ.ಆಸ್ಟ್ರೇಲಿಯಾವನ್ನು ತಮ್ಮ ನೆಲೆಯನ್ನಾಗಿ ಮಾಡಿಕೊಂಡಿರುವ ಭಾರತೀಯ ಮೂಲದ ಜನರ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ನೀವು ಆಸ್ಟ್ರೇಲಿಯಾವನ್ನು ಉತ್ತಮಗೊಳಿಸುತ್ತೀರಿ ಎಂದು ಅವರು ಹೇಳಿದರು.
ಸಿಡ್ನಿಯ ಕ್ಯುಡೋಸ್ ಬ್ಯಾಂಕ್ ಅರೆನಾದಲ್ಲಿ ನಡೆದ ಕಾರ್ಯಕ್ರಮವನ್ನು ಭಾರತ ಮತ್ತು ಆಸ್ಟ್ರೇಲಿಯಾದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಲಕ್ಷಾಂತರ ಜನರು ವೀಕ್ಷಿಸಿದ್ದಾರೆ.