Tuesday, December 16, 2025

ಇಥಿಯೋಪಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ ಸಿಕ್ಕಿತು ಅದ್ದೂರಿ ಸ್ವಾಗತ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಥಿಯೋಪಿಯಾ ಪ್ರಧಾನಿ ಅಬಿ ಅಹ್ಮದ್ ಅಲಿ ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಇಥಿಯೋಪಿಯಾ ಭೇಟಿಗಾಗಿ ಇಂದು ಅಡಿಸ್ ಅಬಾಬಾಗೆ ಬಂದಿಳಿದರು.

ಪ್ರಧಾನ ಆಗಮನಕ್ಕೂ ಮುನ್ನವೇ ಅಡಿಸ್ ಅಬಾಬಾದಾದ್ಯಂತ ಹಾಕಲಾಗಿದ್ದ ಸ್ವಾಗತ ಫಲಕಗಳು, ಪೋಸ್ಟರ್‌ಗಳು ಮತ್ತು ಭಾರತೀಯ ಧ್ವಜಗಳು ಸೇರಿದಂತೆ ಭಾರಿ ಸಿದ್ಧತೆಗಳಿಂದ ಭೇಟಿಯ ಮಹತ್ವ ಸ್ಪಷ್ಟವಾಗಿತ್ತು.

ಭಾರತ-ಇಥಿಯೋಪಿಯಾ ನಡುವಿನ ಸಂಬಂಧ ಬಲಗೊಳ್ಳುತ್ತಿರುವುದರ ಮಧ್ಯೆ ಪ್ರಧಾನಿ ಮೋದಿಯವರ ಈ ಭೇಟಿ ಮಹತ್ವ ಪಡೆದಿದೆ. ಇಥಿಯೋಪಿಯಾವನ್ನು ಭಾರತದ ಪ್ರಮುಖ ಹಾಗೂ ವಿಶ್ವಾಸಾರ್ಹ ಪಾಲುದಾರ ರಾಷ್ಟ್ರವೆಂದು ಪರಿಗಣಿಸಲಾಗಿದೆ.

ಅಭಿವೃದ್ಧಿಯಲ್ಲಿ ಪಾಲುದಾರಿಕೆ, ವ್ಯಾಪಾರ, ಹೂಡಿಕೆ ಕುರಿತು ಪ್ರಧಾನಿ ಮೋದಿ ಅವರು ಇಥಿಯೋಪಿಯನ್ ಪ್ರಧಾನಿ ಅಬಿ ಅಹ್ಮದ್ ಅವರೊಂದಿಗೆ ಮಹತ್ವದ ಚರ್ಚೆ ನಡೆಸುವ ಮತ್ತು ಜಾಗತಿಕ ದಕ್ಷಿಣದ ಪಾಲುದಾರರಾಗಿ ಸಂಬಂಧವನ್ನು ಬಲಪಡಿಸುವಲ್ಲಿ ತಮ್ಮ ಬದ್ಧತೆಯನ್ನು ಇಬ್ಬರೂ ನಾಯಕರು ಪುನರುಚ್ಚರಿಸುತ್ತಾರೆಂದು ನಿರೀಕ್ಷಿಸಲಾಗಿದೆ.

ದಕ್ಷಿಣ-ದಕ್ಷಿಣ ಸಹಕಾರ ಮತ್ತು ಆಫ್ರಿಕಾದೊಂದಿಗಿನ ತನ್ನ ಸಂಬಂಧವನ್ನು ಬಲಪಡಿಸುವ ಭಾರತದ ನಿರಂತರ ಪ್ರಯತ್ನವನ್ನು ಈ ಭೇಟಿ ಪ್ರತಿಬಿಂಬಿಸುತ್ತದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ಸೋಮವಾರ ಜೋರ್ಡಾನ್​ನಿಂದ ನಿರ್ಗಮಿಸುವ ವೇಳೆ ಪ್ರತಿಕ್ರಿಯಿಸಿದ್ದ ಪ್ರಧಾನಿ ಮೋದಿ, ಆಫ್ರಿಕನ್ ಒಕ್ಕೂಟದ ಪ್ರಧಾನ ಕಚೇರಿಯಾಗಿ ಅಡಿಸ್ ಅಬಾಬಾದ ಮಹತ್ವವನ್ನು ಒತ್ತಿ ಹೇಳಿದ್ದರು. 2023ರಲ್ಲಿ ಭಾರತದ ಜಿ20 ಅಧ್ಯಕ್ಷತೆಯ ಸಮಯದಲ್ಲಿ, ಆಫ್ರಿಕನ್ ಒಕ್ಕೂಟವನ್ನು ಗುಂಪಿನ ಖಾಯಂ ಸದಸ್ಯರನ್ನಾಗಿ ಸೇರಿಸಿಕೊಳ್ಳಲಾಯಿತು ಎಂದು ಸ್ಮರಿಸಿದ್ದರು.

error: Content is protected !!