ವಾರಣಾಸಿಯಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣಕ್ಕೆ ಇಂದು ಪ್ರಧಾನಿ ಮೋದಿಯಿಂದ ಶಂಕುಸ್ಥಾಪನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪ್ರಧಾನಿ ನರೇಂದ್ರ ಮೋದಿಯವರು ಇಂದು ವಾರಣಾಸಿಗೆ ಭೇಟಿ ನೀಡಲಿದ್ದು, ಉತ್ತರ ಪ್ರದೇಶದಾದ್ಯಂತ 16 ‘ಅಟಲ್ ಅವಾಸಿಯ ವಿದ್ಯಾಲಯ’ (ವಸತಿ ಶಾಲೆ)ಗಳ ಉದ್ಘಾಟನೆ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಇಂದು ಮಧ್ಯಾಹ್ನ 1:30ರ ಸುಮಾರಿಗೆ ಪ್ರಧಾನಿಯವರು ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮಧ್ಯಾಹ್ನ 3:15ಕ್ಕೆ ರುದ್ರಾಕ್ಷಿ ಅಂತಾರಾಷ್ಟ್ರೀಯ ಸಹಕಾರ ಮತ್ತು ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಲಿರುವ ಕಾಶಿ ಸಂಸದ್ ಸಾಂಸ್ಕೃತಿಕ ಮಹೋತ್ಸವ 2023ರ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಉತ್ತರ ಪ್ರದೇಶದಾದ್ಯಂತ ನಿರ್ಮಿಸಲಾದ 16 ಅಟಲ್ ಅವಾಸಿಯ ವಿದ್ಯಾಲಯವನ್ನು ಉದ್ಘಾಟಿಸಲಿದ್ದಾರೆ.

ವಾರಣಾಸಿಯ ಗಂಜಾರಿ, ರಜತಲಾಬ್‌ನಲ್ಲಿ ನಿರ್ಮಾಣವಾಗಲಿರುವ ಕ್ರಿಕೆಟ್ ಸ್ಟೇಡಿಯಂ ಅನ್ನು ಸುಮಾರು ₹450 ಕೋಟಿ ವೆಚ್ಚದಲ್ಲಿ 30 ಎಕರೆಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಪ್ರಧಾನ ಮಂತ್ರಿಗಳ ಕ್ಷೇತ್ರದಲ್ಲಿರುವ ಕ್ರೀಡಾಂಗಣವು 30,000 ಜನರು ಕುಳಿತುಕೊಳ್ಳುವ ಸಾಮರ್ಥ್ಯವನ್ನು ಹೊಂದಿರಲಿದೆ. ಈ ಕ್ರೀಡಾಂಗಣವು ಹಿಂದೂ ದೇವರಾದ ‘ಭಗವಾನ್ ಶಿವ’ನಿಂದ ಪ್ರೇರಿತವಾದ ವಿಷಯಾಧಾರಿತ ವಾಸ್ತುಶಿಲ್ಪವನ್ನು ಹೊಂದಿರಲಿದೆ ಎಂದು ತಿಳಿದುಬಂದಿದೆ.

ಇನ್ನೂ ಪ್ರತಿ ವಸತಿ ಶಾಲೆಗಳು ಕೂಡ 10-15 ಎಕರೆ ಪ್ರದೇಶದಲ್ಲಿ ತರಗತಿ ಕೊಠಡಿಗಳು, ಕ್ರೀಡಾ ಮೈದಾನ, ಮನರಂಜನಾ ಪ್ರದೇಶಗಳು, ಮಿನಿ ಸಭಾಂಗಣ, ಹಾಸ್ಟೆಲ್ ಸಂಕೀರ್ಣ, ಮೆಸ್ ಮತ್ತು ಸಿಬ್ಬಂದಿಗೆ ವಸತಿ ಫ್ಲಾಟ್‌ಗಳೊಂದಿಗೆ ನಿರ್ಮಿಸಲಾಗಿದೆ. ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ದೇಶಾದ್ಯಂತ ರಾಜಕೀಯ ಪಕ್ಷಗಳು ಸಜ್ಜಾಗುತ್ತಿರುವ ಹಿನ್ನೆಲೆಯಲ್ಲಿ ಉದ್ಘಾಟನೆ ಮತ್ತು ಶಂಕುಸ್ಥಾಪನಾ ಸಮಾರಂಭಗಳು ಮಹತ್ವ ಪಡೆದುಕೊಂಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!