ಪ್ರಥಮ ಬಾರಿಗೆ ಶ್ರೀಕೃಷ್ಣ ಜನ್ಮಭೂಮಿಗೆ ಪ್ರಧಾನಿ ಮೋದಿ ಭೇಟಿ: ಮಾತೆಯನ್ನು ಪೂಜಿಸುವ ರಾಷ್ಟ್ರವೆಂದರೆ ಭಾರತ ಎಂದ ನಮೋ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ಭಗವಾನ್ ಶ್ರೀಕೃಷ್ಣ ಜನ್ಮಭೂಮಿ ಮಂದಿರ ಮಥುರಾಕ್ಕೆ ಐತಿಹಾಸಿಕ ಭೇಟಿ ನೀಡಿದ್ದು, ಶ್ರೀಕೃಷ್ಣನ ಪರಮಭಕ್ತೆ ಸಂತ ಮೀರಾಬಾಯಿ ಅವರ 525 ನೇ ಜಯಂತಿ ಉತ್ಸವ(ಮೀರಾಬಾಯಿ ಜನ್ಮೋತ್ಸವ)ದಲ್ಲಿ ಪಾಲ್ಗೊಂಡಿದ್ದಾರೆ. ಮಥುರಾದಲ್ಲಿ ಶ್ರೀಕೃಷ್ಣನಿಗೆ ವಿಶೇಷ ಪ್ರಾರ್ಥನೆ , ಪೂಜೆ ಸಲ್ಲಿಸಿದರು. ದೇಶದ ಪ್ರಧಾನಿಯೊಬ್ಬರು ಇದೇ ಮೊದಲ ಬಾರಿಗೆ ಶ್ರೀಕೃಷ್ಣ ಜನ್ಮಸ್ಥಾನಕ್ಕೆ ಭೇಟಿ ನೀಡಿದ್ದಾರೆ.

ಅವರು ಈ ಸಂದರ್ಭ ನಡೆದ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ಮೀರಾಬಾಯಿ ಕುಟುಂಬ ಮತ್ತು ರಾಜಸ್ತಾನದ ಜನತೆ ನಮ್ಮ ಧಾರ್ಮಿಕ ಕ್ಷೇತ್ರಗಳನ್ನು ರಕ್ಷಿಸುವುದಕ್ಕಾಗಿ ತಮ್ಮದೆಲ್ಲವನ್ನೂ ತ್ಯಾಗ, ಸಮರ್ಪಣೆಗೈದವರು.ಭಾರತದ ಆತ್ಮವನ್ನು ರಕ್ಷಿಸುವುದಕ್ಕಾಗಿ ರಾಜಸ್ತಾನದ ಜನತೆ ಗೋಡೆಯಂತೆ ನಿಂತರು.ಈ ಸಮಾರಂಭವು ನಮಗೆ ತ್ಯಾಗ, ಶೌರ್ಯಗಳನ್ನು ಮತ್ತೆ ನೆನಪಿಸುವಂತೆ ಮಾಡಿದೆ ಎಂದಿದ್ದಾರೆ.

“ಬೃಜ್ ಗುಜರಾತಿನೊಂದಿಗೆ ಅವಿನಾ ಬಾಂಧವ್ಯ ಹೊಂದಿದೆ.ಮಥುರಾದ ಶ್ರೀಕೃಷ್ಣ ಗುಜರಾತಿಗೆ ತೆರಳಿದ ಬಳಿಕ ದ್ವಾರಕಾಶನಾದರೆ, ಸಂತ ಮೀರಾಬಾಯಿ ರಾಜಸ್ತಾನದಿಂದ ಮಥುರಾಗೆ ಬಂದು , ಬದುಕಿನ ಕೊನೆಯ ಕ್ಷಣಗಳನ್ನು ದ್ವಾರಕೆಯಲ್ಲಿ ಕಳೆದುದು ಮಹತ್ವದ್ದಾಗಿದೆ.ವೃಂದಾವನ ಹೊರತಾಗಿ ಸಂತ ಮೀರಾಳ ಪೂಜೆ ಪೂರ್ಣಗೊಳ್ಳದು “ಎಂದು ಮೋದಿಯವರು ಬಣ್ಣಿಸಿದರು.

“‘ಭಾರತ ’ಯಾವತ್ತೂ ಮಾತೆಯನ್ನು ಪೂಜಿಸುವ ರಾಷ್ಟ್ರವಾಗಿದೆ.ಮಾತೆಯರು ಹೊಣೆಗಾರಿಕೆಯನ್ನು ನಿಭಾಯಿಸುವುದಷ್ಟೇ ಅಲ್ಲದೆ ಸಮಾಜಕ್ಕೆ ಮಾರ್ಗದರ್ಶನ ಮಾಡುವವರು.ಸಂತ ಮೀರಾಬಾಯಿ ಇದಕ್ಕೆ ತಾಜಾ ನಿದರ್ಶನ”ಎಂದು ಮೋದಿಯವರು, ಮೀರಾಬಾಯಿ ಗೌರವಾರ್ಥ ಅಂಚೆಚೀಟಿಯೊಂದನ್ನು ಬಿಡುಗಡೆಗೊಳಿಸಿದರು.

ಮೀರಾಬಾಯಿ ಜನ್ಮೋತ್ಸವವು ವರ್ಷಪೂರ್ತಿ ನಡೆಯಲಿದೆ.ಮೀರಾಬಾಯಿ ಕುರಿತ ಸಾಕ್ಷ್ಯಚಿತ್ರವೊಂದನ್ನು ಈ ಸಂದರ್ಭ ಪ್ರದರ್ಶಿಸಲಾಗಿದ್ದು, ಇದರಲ್ಲಿ ಮಥುರಾ ಸಂಸದೆ, ಭರತನಾಟ್ಯ ಪ್ರವೀಣೆ ಹೇಮಮಾಲಿನಿ ಅವರ ನೃತ್ಯವೂ ಒಳಗೊಂಡಿತ್ತು.ಈ ಹಿಂದೆ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಅಲ್ಲಿಗೆ ಹೋಗಲು ಬಯಸಿದ್ದರೂ ಸಾಧ್ಯವಾಗಿರಲಿಲ್ಲ.

ಪ್ರಧಾನಿಯವರು ಮಥುರಾ ಶ್ರೀ ಕೃಷ್ಣ ದೇವಾಲಯಕ್ಕೆ ಭೇಟಿ ನೀಡಿದ ಚಿತ್ರಗಳನ್ನು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದು, “ಶ್ರೀಕೃಷ್ಣ ಜನ್ಮಭೂಮಿ ಮಂದಿರದಲ್ಲಿ ಪವಿತ್ರ ಪೂಜೆಗೈಯ್ಯುವ ವಿಶೇಷ ಭಾಗ್ಯ ಲಭಿಸಿತು.ಗಿರಿಧರ್ ಗೋಪಾಲನ ಅತ್ಯಂತ ಸುಂದರ ನೆಲೆ ಇದಾಗಿದೆ.ಬೃಜ್‌ನ ಎಲ್ಲೆಡೆ ಆತನ ಸಾನ್ನಿಧ್ಯದ ಅನುಭೂತಿ ಕಂಡುಬರುತ್ತಿದ್ದು ನನ್ನನ್ನು ಭಾವುಕನನ್ನಾಗಿಸಿದೆ “ಎಂದು ಬರೆದಿದ್ದಾರೆ.

ಯೋಗ, ಕುಂಭಮೇಳಕ್ಕೆ ಜಾಗತಿಕ ಮನ್ನಣೆ ಒದಗಿಸಿದ ಮೋದಿ: ಯೋಗಿ
ಮಥುರಾದ ಸಂಸದೆ ನಟಿ ಹೇಮಮಾಲಿನಿ ಅವರ ನೇತೃತ್ವದಲ್ಲಿ ಪ್ರಧಾನಿ ಮೋದಿಯವರನ್ನು ಹಾರ್ದಿಕವಾಗಿ ಸ್ವಾಗತಿಸಲಾಯಿತು.ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಧಾನಿಯವರನ್ನು ಗೌರವಿಸಿದರು. ಇಡಿ ಜಗತ್ತಿಗೆ ಯೋಗವನ್ನು ಪ್ರಸಾರಗೈದ ಕೀರ್ತಿ ಪ್ರಧಾನಿ ಮೋದಿಯವರಿಗೆ ಸಲ್ಲಬೇಕು ಮತ್ತು ಕುಂಭ ಮೇಳಕ್ಕೆ ಜಾಗತಿಕ ಮನ್ನಣೆ ತಂದುಕೊಟ್ಟವರು ಕೂಡ ಮೋದಿಯವರು ಎಂಬುದಾಗಿ ಯೋಗಿ ಆದಿತ್ಯನಾಥ್ ಅವರು ಈ ಸಂದರ್ಭ ಬಣ್ಣಿಸಿದರು.“ನೀವು 190 ದೇಶಗಳಿಗೆ ಯೋಗವನ್ನು ಹರಡಿದಿರಿ…ಕುಂಭ ಮೇಳಕ್ಕೆ ವಿಶ್ವಮನ್ನಣೆ ತಂದುಕೊಟ್ಟಿರಿ..ಈಗ ಮಥುರಾ , ವೃಂದಾವನ ಮತ್ತು ಎಲ್ಲ ಯಾತ್ರಾ ಸ್ಥಳಗಳಿಗೂ ಕಳೆದ ೯ವರ್ಷಗಳಲ್ಲಿ ಲಾಭವಾಗುವಂತೆ ಮಾಡಿದಿರಿ…ಎಂದು ಯೋಗಿಯವರು ಮೋದಿಯವರನ್ನುದ್ದೇಶಿಸಿ ಕೃತಜ್ಞತೆ ಸಲ್ಲಿಸಿದರು.

ಮುಂಬರುವ ಅಯೋಧ್ಯಾ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯವನ್ನು ಉಲ್ಲೇಖಿಸಿದ ಯೋಗಿಯವರು, ಅಯೋಧ್ಯೆಯಲ್ಲಿನ ಪ್ರತಿಯೊಬ್ಬ ವ್ಯಕ್ತಿಯೂ ಯಾವುದು ಅಸಾಧ್ಯ ಎಂದು ಭಾವಿಸಿದ್ದರೋ ಅದಿಂದು ನರೇಂದ್ರ ಮೋದಿಜಿಯವರ ನಾಯಕತ್ವದಲ್ಲಿ ಸಾಕಾರಗೊಳ್ಳುತ್ತಿದ್ದು, ಇದಕ್ಕೆ 2024 ರ ಜ.22 ಸಾಕ್ಷಿಯಾಗಲಿದೆ ಎಂದರು.

ಇದಕ್ಕೂ ಮುನ್ನ ಮಥುರಾ ಭೇಟಿ ಬಗ್ಗೆ ಪ್ರಸ್ತಾವಿಸಿದ್ದ ಮೋದಿಯವರು ,“ಸಂತ ಮೀರಾಬಾಯಿ ಅವರ ಬದುಕು ಅತ್ಯಂತ ಪವಿತ್ರ ಮತ್ತು ಶುದ್ಧ ಭಕ್ತಿ, ನಂಬಿಕೆಗೆ ಅನುಪಮ ಉದಾಹರಣೆಯಾಗಿದೆ.ಮೀರಾಬಾಯಿ ಭಗವಾನ್‌ಶ್ರೀಕೃಷ್ಣನಿಗೆ ಸಮರ್ಪಿಸಿದ ಸ್ತೋತ್ರಗಳು ಮತ್ತು ದ್ವಿಪದಿಗಳು ಂದು ಕೂಡ ನಮ್ಮೆಲ್ಲರ ಹೃದಯಗಳನ್ನು ಪವಿತ್ರೆಯಿಂದ ತುಂಬಿಕೊಳ್ಳುತ್ತವೆ. ಮೀರಾಬಾಯಿ ಅವರ ಜನ್ಮೋತ್ಸವದಲ್ಲಿ ಪಾಲ್ಗೊಳ್ಳುವ ಅವಕಾಶ ನನ್ನ ಪಾಲಿನ ಸೌಭಾಗ್ಯ “ಎಂದು ಬರೆದುಕೊಂಡಿದ್ದರು.ಸಂತ ಮೀರಾಬಾಯಿ ೧೬ನೇ ಶತಮಾನದ ಶ್ರೇಷ್ಠ ಶ್ರೀಕೃಷ್ಣ ಭಕ್ತೆಯಾಗಿ ವಿಖ್ಯಾತರು.

ಮೋದಿಯವರಿಂದ ವಿಶೇಷ ಪ್ರಾರ್ಥನೆ
ಪ್ರಧಾನಿ ಮೋದಿಯವರು ಶ್ರೀಕೃಷ್ಣ ಜನ್ಮಭೂಮಿ ಮಂದಿರದಲ್ಲಿ ಭಗವಾನ್ ಶ್ರೀಕೃಷ್ಣನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ, ಅನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲೂ ಪಾಲ್ಗೊಂಡರು.ಸಮಾರಂಭದಲ್ಲಿ ಯೋಗಿ ಆದಿತ್ಯನಾಥ್ ಅವರಲ್ಲದೆ ರಾಜ್ಯಪಾಲೆ ಆನಂದಿ ಬೆನ್ ಪಟೇಲ್, ಹೇಮಮಾಲಿನಿ ಮತ್ತಿತರ ಅನೇಕ ಹಿರಿಯ ನಾಯಕರು, ಗಣ್ಯರು ಪಾಲ್ಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!