ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೆಪ್ಟೆಂಬರ್ 3 ರಿಂದ 5 ರವರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಬ್ರೂನಿ ಮತ್ತು ಸಿಂಗಾಪುರ ಪ್ರವಾಸ ಮಾಡಲಿದ್ದಾರೆ.
ಮೊದಲು ಸೆಪ್ಟೆಂಬರ್ 3 ಮತ್ತು 4 ರಂದು ಬ್ರೂನಿಗೆ ಭೇಟಿ ನೀಡಲಿದ್ದಾರೆ. ಬ್ರೂನಿಯ ಸುಲ್ತಾನ್ ಹಸನಲ್ ಬೊಲ್ಕಿಯಾ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ಬಳಿಕ ಪ್ರಧಾನಿ ಲಾರೆನ್ಸ್ ವಾಂಗ್ ಅವರ ಆಹ್ವಾನದ ಮೇರೆಗೆ ಸಿಂಗಾಪುರಕ್ಕೆ ಭೇಟಿ ನೀಡಲಿದ್ದಾರೆ. ಈ ಭೇಟಿಗಳು ಎರಡೂ ದೇಶಗಳೊಂದಿಗೆ ಭಾರತದ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ.
ಪ್ರಧಾನಿ ನರೇಂದ್ರ ಮೋದಿ ಅವರು 2024ರ ಸೆಪ್ಟೆಂಬರ್ 3 ಮತ್ತು 4ರಂದು ಬ್ರೂನಿಗೆ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ. ಸುಲ್ತಾನ್ ಹಾಜಿ ಹಸನಲ್ ಬೊಲ್ಕಿಯಾ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿಯವರು ಈ ಪ್ರವಾಸ ಕೈಗೊಂಡಿದ್ದಾರೆ ಎಂದು ಹೇಳಿದರು.
ಇದು ಬ್ರೂನಿಗೆ ಭಾರತದ ಪ್ರಧಾನಿಯ ಮೊದಲ ದ್ವಿಪಕ್ಷೀಯ ಭೇಟಿಯಾಗಿದೆ. ಪ್ರಧಾನಮಂತ್ರಿಯವರ ಭೇಟಿ ವಿಶೇಷವಾಗಿ ಭಾರತೀಯ ವಲಸಿಗ ಸಮುದಾಯದ ಹಿತಾಸಕ್ತಿಗಳ ಮೇಲೆ ಕೇಂದ್ರೀಕರಿಸುತ್ತದೆ ಎನ್ನಲಾಗಿದೆ. ಭಾರತವು ಬ್ರೂನಿಯಿಂದ ಹೈಡ್ರೋಕಾರ್ಬನ್‌ಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಜತೆಗೆ ನೈಸರ್ಗಿಕ ಅನಿಲದ ಪೂರೈಕೆ ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಪ್ರಧಾನಿ ಭೇಟಿ ವೇಳೆ ಈ ವಿಷಯದ ಬಗ್ಗೆ ವಿಶೇಷ ಚರ್ಚೆ ನಡೆಸುವ ಸಾಧ್ಯತೆಯಿದೆ.
ಇದಾದ ನಂತರ ಪ್ರಧಾನಿ ಮೋದಿ ಅವರು ಬ್ರೂನಿಯಿಂದ ಸಿಂಗಾಪುರಕ್ಕೆ ಭೇಟಿ ನೀಡಲಿದ್ದಾರೆ. ಸಿಂಗಾಪುರದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆಯಿದೆ. ಆಸಿಯಾನ್ ಚೌಕಟ್ಟಿನಡಿಯಲ್ಲಿ ಭಾರತ ಮತ್ತು ಸಿಂಗಾಪುರ ನಡುವಿನ ಮುಕ್ತ ವ್ಯಾಪಾರ ಒಪ್ಪಂದವನ್ನು (ಎಫ್‌ಟಿಎ) ಪರಿಶೀಲಿಸುವ ಸಾಧ್ಯತೆಯಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಪ್ರಧಾನಿ ಮೋದಿ ಇತ್ತೀಚೆಗೆ ಪೋಲೆಂಡ್ ಮತ್ತು ಉಕ್ರೇನ್‌ಗೆ ಭೇಟಿ ನೀಡಿದ್ದರು.