ಮೋದಿ ನಾಯಕತ್ವದಲ್ಲಿ ಬಿಜೆಪಿ ಎಲ್ಲಾ ಅಪೂರ್ಣ ಕೆಲಸ ಪೂರ್ಣಗೊಳಿಸುತ್ತದೆ: ಸಚಿವ ಜಿತೇಂದ್ರ ಸಿಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್

ಹೊಸದಿಲ್ಲಿ: ಪಾಕ್ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ಭಾರತದ ಭೂಪ್ರದೇಶಕ್ಕೆ ಮರು-ಸಂಯೋಜಿಸುವ ಗುರಿಯಲ್ಲಿ ಬಿಜೆಪಿ ಸರಕಾರವು ದೃಢವಾಗಿದೆ ಎಂದು ಪ್ರಧಾನಿ ಕಾರ್ಯಾಲಯದ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ತಿಳಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಕಥುವಾದಲ್ಲಿ ಮಹಾರಾಜ ಗುಲಾಬ್ ಸಿಂಗ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದ ನಂತರ ಅವರು ಈ ಹೇಳಿಕೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 1994ರಲ್ಲಿ ಪ್ರಧಾನಿ ನರಸಿಂಹರಾವ್ ನೇತೃತ್ವದ ಭಾರತೀಯ ಸಂಸತ್ತು ಪಿಒಕೆ ಭಾರತ ಮತ್ತು ಪಾಕಿಸ್ತಾನದ ನಡುವಿನ ವಿವಾದದ ಏಕೈಕ ಕಾರಣ ಎಂಬ ನಿರ್ಣಯವನ್ನು ಅಂಗೀಕರಿಸಿತು. ಪಾಕಿಸ್ತಾನದ ಅತಿಕ್ರಮಣಕ್ಕೆ ಒಳಗಾಗಿರುವ ಜಮ್ಮು ಮತ್ತು ಕಾಶ್ಮೀರದ ಭಾಗವನ್ನು ಭಾರತದ ಭೂಪ್ರದೇಶಕ್ಕೆ ಮತ್ತೆ ಸೇರ್ಪಡೆಗೊಳಿಸಿ, ಅದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ.

ಬಿಜೆಪಿ ಏನನ್ನಾದರೂ ಸಾಧಿಸಲು ಹೊರಟಾಗ, ಅನೇಕರು ನಮ್ಮನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಅಥವಾ ಅದರ ಬಗ್ಗೆ ಆಳವಾಗಿ ಯೋಚಿಸುವುದಿಲ್ಲ. ನಾವು 370ನೇ ವಿಧಿಯ ರದ್ದತಿಯ ಬಗ್ಗೆ ಮಾತನಾಡುವಾಗ, ಅನೇಕರು ನಮ್ಮ ಕುರಿತು ತಮಾಷೆ ಮಾಡುತ್ತಿದ್ದರು. ಆದರೆ ಅದು ವಾಸ್ತವವಾಗಿದ್ದನ್ನು ನೀವು ನೋಡಿದ್ದೀರಿ ಎಂದು ಸಚಿವ ಸಿಂಗ್ ಗಮನಸೆಳೆದಿದ್ದಾರೆ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು 1980ರ ದಶಕದಲ್ಲಿ ಬಿಜೆಪಿ ಮುಂದೊಂದು ದಿನ ಅಧಿಕಾರಕ್ಕೆ ಬರಲಿದೆ ಎಂದು ಘೋಷಿಸಿದಾಗ, ಪಕ್ಷವನ್ನು ಅನೇಕರು ಅಪಹಾಸ್ಯ ಮಾಡಿದರು. ಇದೀಗ ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ, ಬಿಜೆಪಿ ಅಪೂರ್ಣವಾದ ಪ್ರತಿಯೊಂದು ಕೆಲಸವನ್ನು ಪೂರ್ಣಗೊಳಿಸುತ್ತದೆ ಎಂದು ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ ಎಂಬ ಅಂಶದ ಬಗ್ಗೆ ಎರಡು ಅಭಿಪ್ರಾಯಗಳಿಲ್ಲ. ಸಂಸತ್ತು 1994ರಲ್ಲಿ ಈ ಬಗ್ಗೆ ನಿರ್ಣಯವನ್ನು ಅಂಗೀಕರಿಸಿತ್ತು. ಇದನ್ನು ಪಿ.ವಿ. ನರಸಿಂಹರಾವ್ ಸರಕಾರ ಮಾಡಿತ್ತು ಮತ್ತು ನಾವು ಅದನ್ನು ಬೆಂಬಲಿಸಿದ್ದೆವು. ಪಾಕಿಸ್ತಾನ ಕಾನೂನುಬಾಹಿರವಾಗಿ ವಶಕ್ಕೆ ಪಡೆದುಕೊಂಡಿರುವ ಕಾಶ್ಮೀರದ ಭಾಗಗಳನ್ನು ನಾವು ಹೇಗೆ ಮತ್ತು ಯಾವಾಗ ಹಿಂಪಡೆಯಬಹುದು ಎಂಬುದೇ ಅಸ್ತಿತ್ವದಲ್ಲಿರುವ ಏಕೈಕ ಪ್ರಶ್ನೆಯಾಗಿದೆ.

ಏನು ಹೇಳುತ್ತದೆ 1994 ಫೆಬ್ರವರಿ 22ರ ಸಂಸತ್ ನಿರ್ಣಯ
ಫೆಬ್ರವರಿ 22, 1994ರ ಸಂಸತ್ತಿನ ನಿರ್ಣಯವು ಭಾರತದ ಜನರ ಪರವಾಗಿ, ಈ ಸದನವು ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ. ಅದನ್ನು ದೇಶದಿಂದ ಪ್ರತ್ಯೇಕಿಸುವ ಯಾವುದೇ ಪ್ರಯತ್ನಗಳನ್ನು ಅಗತ್ಯವಿರುವ ಎಲ್ಲ ವಿಧಾನಗಳಿಂದ ವಿರೋಧಿಸಲಾಗುತ್ತದೆ ಎಂದು ದೃಢವಾಗಿ ಘೋಷಿಸುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!