ʻದೋನ್ಯಿ ಪೊಲೋ ವಿಮಾನʼ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ: ಕಮೆಂಗ್ ಜಲವಿದ್ಯುತ್ ಕೇಂದ್ರ ರಾಷ್ಟ್ರಕ್ಕೆ ಸಮರ್ಪಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅರುಣಾಚಲ ಪ್ರದೇಶದ ಇಟಾನಗರದಲ್ಲಿ ಮೊದಲ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣವಾದ ದೋನ್ಯಿ ಪೊಲೊ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದರು. ಜೊತೆಗೆ 600 MW ಸಾಮರ್ಥ್ಯದ ಕಮೆಂಗ್ ಜಲವಿದ್ಯುತ್ ಕೇಂದ್ರವನ್ನು ಮೋದಿ ಅವರು ದೇಶಕ್ಕೆ ಸಮರ್ಪಿಸಿದರು. ವಿಮಾನ ನಿಲ್ದಾಣ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉಡಾನ್ ಕರಪತ್ರವನ್ನು ಸಹ ಬಿಡುಗಡೆ ಮಾಡಿದರು.

ಉದ್ಘಾಟನಾ ಬಳಿಕ ಮಾತನಾಡಿದ ಪ್ರಧಾನಿ, ನಾವು ಅಡಿಗಲ್ಲು ಹಾಕಿದ ಯೋಜನೆಗಳನ್ನು ಉದ್ಘಾಟಿಸುವ ಕಾರ್ಯ ಸಂಸ್ಕೃತಿಯನ್ನು ತಂದಿದ್ದೇವೆ ಎಂಬುದು ನಿಮಗೆ ತಿಳಿದಿದೆ. ಅಟ್ಕಾನಾ, ಲಟ್ಕಾನಾ, ಭಟ್ಕಾನಾ ಯುಗ ಕಳೆದು ಹೋಗಿದೆ ಎಂದರು. ಅರುಣಾಚಲ ಪ್ರದೇಶದ ಇಟಾನಗರದಲ್ಲಿ ನಾನು 2019 ರಲ್ಲಿ ವಿಮಾನ ನಿಲ್ದಾಣದ ಅಡಿಗಲ್ಲು ಹಾಕಿದಾಗ, ಚುನಾವಣೆಗಳು ಹತ್ತಿರದಲ್ಲಿದ್ದವು. ಆಗ ರಾಜಕೀಯ ವಿಮರ್ಶಕರು ಮೋದಿ ವಿಮಾನ ನಿಲ್ದಾಣವನ್ನು ನಿರ್ಮಿಸಲು ಹೋಗುತ್ತಿಲ್ಲ ಬದಲಿಗೆ ವೋಟಿಂಗ್‌ಗಾಗಿ ಮೋದಿ ಕಲ್ಲು ಹಾಕುತ್ತಿದ್ದಾರೆ ಎಂದು ಮಾತನಾಡಿದ್ದರು. ಇಂದಿನ ಉದ್ಘಾಟನೆ ಅವರ ಮುಖದ ಮೇಲೆ ಕಪಾಳಮೋಕ್ಷ ಮಾಡಿದಂತಾಗಿದೆ ಎಂದರು.

ಸ್ವಾತಂತ್ರ್ಯದ ನಂತರ, ಈಶಾನ್ಯವು ವಿಭಿನ್ನ ಯುಗಕ್ಕೆ ಸಾಕ್ಷಿಯಾಯಿತು. ದಶಕಗಳಿಂದ ಈ ಪ್ರದೇಶವು ನಿರ್ಲಕ್ಷ್ಯದ ಬಲಿಪಶುವಾಗಿತ್ತು. ಅಟಲ್ ಜಿ ಅವರ ಸರ್ಕಾರ ಬಂದಾಗ ಇದನ್ನು ಬದಲಾಯಿಸಲು ಮೊದಲ ಬಾರಿಗೆ ಪ್ರಯತ್ನಗಳನ್ನು ಮಾಡಲಾಯಿತು. ಈಶಾನ್ಯ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯ ಮಾಡಿದ ಮೊದಲನೇ ಸರ್ಕಾರ ನಮ್ಮದು ಎಂದರು. ನಂತರ ಬಂದ ಸರ್ಕಾರಗಳು ಆವೇಗವನ್ನು ಮುಂದಕ್ಕೆ ಕೊಂಡೊಯ್ಯಲಿಲ್ಲ.

ಈಗ ಮತ್ತೊಮ್ಮೆ ನಿಮ್ಮ ಸೇವೆ ಮಾಡಲು ನೀವು ನನಗೆ ಅವಕಾಶ ನೀಡಿದರೆ ಬದಲಾವಣೆಯ ಮತ್ತೊಂದು ಯುಗ ಬಂದೀತು. ಹಿಂದಿನ ಸರ್ಕಾರಗಳು ಗಡಿ ಭಾಗದ ಹಳ್ಳಿಗಳನ್ನು ಕೊನೆಯ ಗ್ರಾಮವೆಂದು ಪರಿಗಣಿಸಲಾಗಿತ್ತು ಆದರೆ ನಮ್ಮ ಸರ್ಕಾರವು ಅವುಗಳನ್ನು ಮೊದಲು ಪರಿಗಣಿಸಿದೆ ಎಂದು ವಿಪಕ್ಷಗಳ ವಿರುದ್ಧ ಟೀಕಾ ಪ್ರಹಾರ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here