ನಾಲ್ಕು ಜಿಲ್ಲೆಗಳಲ್ಲಿ ಇಂದು ಪ್ರಧಾನಿ ಮೋದಿ ಮತಬೇಟೆ: ಎಲ್ಲೆಲ್ಲಿ ಸಂಚಾರ ಬಂದ್ ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯ ವಿಧಾನಸಭೆ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಮೊದಲ ದಿನದ ಮತಬೇಟೆ ಭರ್ಜರಿಯಾಗಿ ನೆರವೇರಿದೆ. ಇಂದು 4 ಜಿಲ್ಲೆಗಳಲ್ಲಿ ಮೋದಿ ಪ್ರಚಾರ ನಡೆಸಲಿದ್ದಾರೆ. ಇಂದು ಕೋಲಾರದಲ್ಲಿ ಮೋದಿ ಪ್ರಚಾರ ನಡೆಸಲಿದ್ದು ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಸಂಚಾರ ಬದಲಾವಣೆ ಮಾಡಲಾಗಿದೆ. ಕೋಲಾರದ ಹಲವು ಮಾರ್ಗಗಳಲ್ಲಿ ವಾಹನ ಸಂಚಾರ ಬಂದ್‌ ಮಾಡಲಾಗಿದೆ.

ಪ್ರಧಾನಿ ಮೋದಿ ಇಂದು ಬೆಳಗ್ಗೆ 11 ಗಂಟೆಗೆ ಕೋಲಾರದಲ್ಲಿ ಪ್ರಚಾರ ನಡೆಸಲಿದ್ದಾರೆ. ಬಳಿಕ ಮಧ್ಯಾಹ್ನ 2 ಗಂಟೆ ಜೆಡಿಎಸ್ ಭದ್ರಕೋಟೆ, ಮಾಜಿ ಸಿಎಂ ಕುಮಾರಸ್ವಾಮಿ ಅವರ ಕ್ಷೇತ್ರ ಚನ್ನಪಟ್ಟಣದಲ್ಲಿ ಪ್ರಚಾರ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ 3.30ಕ್ಕೆ ಹಾಸನ ಜಿಲ್ಲೆ ಬೇಲೂರಿನಲ್ಲಿ ಮೋದಿ ಮತ್ತೊಂದು ಪ್ರಚಾರ ಸಭೆ ನಡೆಸಲಿದ್ದಾರೆ. ಸಂಜೆ 5.45ಕ್ಕೆ ಮೈಸೂರಿನಲ್ಲಿ ಮೋದಿ ರೋಡ್ ಶೋ ನಡೆಸಲಿದ್ದಾರೆ. ವಿದ್ಯಾಪೀಠ ವೃತ್ತದಿಂದ ಶುರುವಾಗುವ ಮೋದಿ ಅವರ ರೋಡ್ ಶೋ, ಬನ್ನಿಮಂಟಪ ರಸ್ತೆ LIC ವೃತ್ತದವರೆಗೆ ನಡೆಯಲಿದೆ. 45 ನಿಮಿಷಗಳು ಈ ರೋಡ್​ಶೋ ನಡೆಯಲಿದೆ.

ಇಂದು ಕೋಲಾರದಲ್ಲಿ ಪ್ರಧಾನಿ ಮೋದಿ ಚುನಾವಣಾ ಪ್ರಚಾರ ಹಿನ್ನೆಲೆ ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಸಂಚಾರ ಬದಲಾವಣೆ ಮಾಡಲಾಗಿದೆ. ಕೋಲಾರದ ಹಲವು ಮಾರ್ಗಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗುತ್ತದೆ. ಕೋಲಾರ ತಾಲೂಕಿನ ಕೆಂದಟ್ಟಿ ಗ್ರಾಮದ ಹೆದ್ದಾರಿ ಪಕ್ಕದಲ್ಲೇ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಸಮಾವೇಶಕ್ಕೆ ಸಾವಿರಾರು ಜನ ಬರುವ ಹಿನ್ನೆಲೆ ಸಂಚಾರ ದಟ್ಟಣೆ ಸಾಧ್ಯತೆಯಿದೆ. ಹೀಗಾಗಿ ಬೆಂಗಳೂರಿನಿಂದ ಚೆನ್ನೈಗೆ ಹೋಗುವ ವಾಹನಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.

ಬೆಂಗಳೂರಿನಿಂದ ಬರುವ ವಾಹನಗಳು ಬೆಳ್ಳೂರು, ನರಸಾಪುರ, ವೇಮಗಲ್‌, ಕೋಲಾರ ನಗರ, ಟಮಕ ಮಾರ್ಗವಾಗಿ ತೆರಳಲು ಸೂಚಿಸಲಾಗಿದೆ. ಬೆಂಗಳೂರಿಗೆ ಹೋಗುವ ವಾಹನಗಳಿಗೆ ಪರ್ಯಾಯ ರಸ್ತೆ ವ್ಯವಸ್ಥೆ ಮಾಡಲಾಗಿದೆ. ಕೋಲಾರ ಹೊರವಲಯದ ಪವನ್ ಕಾಲೇಜು ಸರ್ವೀಸ್ ರಸ್ತೆ ಮೂಲಕ ಅಮ್ಮೇರಹಳ್ಳಿ, ವಕ್ಕಲೇರಿ ಗ್ರಾಮದ ಮೂಲಕ ದೊಡ್ಡಶಿವಾರದ ಕಡೆಯಿಂದ ನರಸಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ 8 ಗಂಟೆಯಿಂದ – ಸಮಾರಂಭ ಮುಗಿಯವವರೆಗೂ ಬದಲಿ ರಸ್ತೆಗಳಲ್ಲಿ ಸಂಚಾರ ಮಾಡುವಂತೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!