ಹೊಸದಿಗಂತ ಡಿಜಿಟಲ್ ಡೆಸ್ಕ್
ಬೆಂಗಳೂರು: ಕಲೆ ಹಾಗೂ ಸಮಾಜಸೇವೆಯಲ್ಲಿ ತಮ್ಮನ್ನು ಎಳೆಯ ವಯಸ್ಸಿನಲ್ಲೇ ತೊಡಗಿಸಿಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಬೆಂಗಳೂರಿನ ಇಬ್ಬರು ವಿದ್ಯಾರ್ಥಿಗಳಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುಯಲ್ ವೇದಿಕೆ ಮೂಲಕ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ನೀಡಿದರು.
ದೇಶದಾದ್ಯಂತ ಒಟ್ಟು 29 ಮಕ್ಕಳಿಗೆ ಕಲೆ, ಕ್ರೀಡೆ, ನಾವಿನ್ಯತೆ, ಶಿಕ್ಷಣ, ಸಾಹಸ ಹಾಗೂ ಸಮಾಜ ಸೇವೆ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ ಇಂದು ಪ್ರಧಾನಿಯವರು ಪ್ರಶಸ್ತಿ ನೀಡಿ ಪುರಸ್ಕರಿಸಿ, ನೇರ
ಸಂವಾದ ನಡೆಸಿದರು.
ಪ್ರಶಸ್ತಿ ಪುರಸ್ಕೃತರ ಪೈಕಿ 14 ಹೆಣ್ಣು ಮಕ್ಕಳು ಇದ್ದ ಬಗ್ಗೆ ಪ್ರಧಾನಿ ಅತೀವ ಹರ್ಷ ವ್ಯಕ್ತ ಪಡಿಸಿ, ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಪ್ರಯುಕ್ತ ಪ್ರಧಾನಿ ಶುಭ ಹಾರೈಸಿದರು.
ದೊಡ್ಡ ಸಾಧನೆ ಮಾಡಲು ಚಿಕ್ಕ ವಯಸ್ಸು ಅಡ್ಡಿ ಬರುವುದಿಲ್ಲ ಎಂದ ಪ್ರಧಾನಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪುಟಾಣಿಗಳನ್ನು ಅಭಿನಂದಿಸಿದರು. ದೇಶದಾದ್ಯಂತ ನಿಮ್ಮಂತೆ ಇನ್ನೂ ಸಾವಿರಾರು ಪ್ರತಿಭಾನ್ವಿತ ಮಕ್ಕಳು ಇದ್ದಾರೆ. ಅವರನ್ನೂ ಗುರುತಿಸುವ ಕಾರ್ಯವಾಗಬೇಕು. ನಿಮ್ಮ ಸಾಧನೆ ನಿಮ್ಮ ಮೇಲಿನ ಜವಾಬ್ದಾರಿಯನ್ನು, ನೀರೀಕ್ಷೆಗಳನ್ನೂ ಹೆಚ್ಚಿಸಲಿದೆ. ಅದರ ಒತ್ತಡಕ್ಕೆ ಮಣಿಯದೇ ಅದನ್ನು ಸವಾಲಾಗಿ, ಸ್ಪೂರ್ತಿಯಾಗಿ ಸ್ವೀಕರಿಸಿ ಮುನ್ನಡೆಯಿರಿ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕೇಂದ್ರ ಮಹಿಳಾ ಮತ್ತ ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಜುಬೀನ್ ಇರಾನಿ ಅವರು ಮಾತನಾಡಿ, ಕೋವಿಡ್ ಹಿನ್ನೆಲೆಯಲ್ಲಿ ಬ್ಲಾಕ್ ಚೈನ್ ತಂತ್ರಜ್ಞಾನ ಬಳಸಿ ಪುರಸ್ಕೃತರಿಗೆ ಪ್ರಮಾಣಪತ್ರ ನೇರವಾಗಿ ಅವರ ಸ್ಮಾರ್ಟ್ ಫೋನ್ ಗಳಿಗೆ ತಲುಪಿಸಲಾಗಿದೆ ಎಂದರು. ಈ ಪುರಸ್ಕಾರವು ಪದಕ, ₹ 1 ಲಕ್ಷ ನಗದು ಸೇರಿದಂತೆ ಪ್ರಶಸ್ತಿ ಪ್ರಮಾಣ ಪತ್ರವನ್ನು ಹೊಂದಿರುತ್ತದೆ ಎಂದು ತಿಳಿಸಿದರು.
ಜೆ.ಪಿ. ನಗರದ ಸಂವೇದ್ ಶಾಲೆಯ 8ನೇ ತರಗತಿಯ ವಿದ್ಯಾರ್ಥಿ ಸಯ್ಯದ್ ಫತೀನ್ ಅಹಮದ್ ಕಲಾ ಕ್ಷೇತ್ರದಲ್ಲಿ ಮತ್ತು ಜವಾಹರ್ ನವೋದಯ ಶಾಲೆಯ 12ನೇ ತರಗತಿಯ ವಿದ್ಯಾರ್ಥಿ ಅಭಿನವ್ ಕುಮಾರ್ ಚೌದರಿ ಸಮಾಜ ಸೇವೆ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಹ ಸಾಧನೆ ಮಾಡಿ, ಈ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
ಇಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಈ ಇಬ್ಬರು ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಅವರು ಅಭಿನಂದಿಸಿದರು.
ಸಯ್ಯದ್ ಫತೀನ್ ಅಹಮದ್ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದಲ್ಲಿ ನುರಿತ ಪಿಯಾನೋ ವಾದಕರಾಗಿದ್ದಾರೆ. ಭಾರತ ಸೇರಿದಂತೆ 14 ಇತರೆ ದೇಶಗಳಲ್ಲಿ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಸೈಯದ್ ಫತೀನ್ ಅಹಮದ್ ಅವರು ಲಂಡನ್ ಸ್ಕೂಲ್ ಆಫ್ ಮ್ಯೂಸಿಕ್ ನಲ್ಲಿ ಪದವಿ ಪಡೆದ ಅತ್ಯಂತ ಕಿರಿಯ ಭಾರತೀಯನಾಗಿದ್ದಾನೆ.
ಅಭಿನವ್ ಕುಮಾರ್ ಚೌದರಿ ಸರ್ವರಿಗೂ ಸಮಪಾಲು ದ್ಯೇಯದೊಂದಿಗೆ ಪುಸ್ತಕಗಳ ಮರುಬಳಕೆ, ಮರುಮಾರಾಟ, ವಿದ್ಯಾರ್ಥಿಗಳಿಗೆ ರೂಪಿಸಿರುವ ವಿದ್ಯಾರ್ಥಿವೇತನ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವುದು ಸೇರಿದಂತೆ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿ ಅದರ ಮರುಬಳಕೆ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ.
ಕ್ರೂಸ್ ಬೈ ಬುಕ್ಸ್, ಕ್ರೂಸ್ ಎಂಪವರ್ ಮತ್ತು ಕ್ರೂಸ್ ಜೀರೋ ವೇಸ್ಟ್ ಹೆಸರಿನ ಕ್ರೂಸ್ ಸಂಸ್ಥೆಯ ಮೂಲಕ ಅಭಿನವ ಈ ಚಟುವಟಿಕೆಯಲ್ಲಿ ಸಾಧನೆ ಮಾಡಿದ್ದಾರೆ.
ಇದಕ್ಕಾಗಿ ರೈಸ್ ಸ್ಕಾಲರ್ಶಿಪ್ ಅಡಿ ಗ್ಲೋಬಲ್ ಫೈನಲಿಸ್ಟ್ ಆಗಿ ಅವರು ಆಯ್ಕೆಯಾಗಿದ್ದು $ 1000 ಹಣವನ್ನು ಸಂಸ್ಥೆಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನು $ 0.5 ಬಿಲಿಯನ್ ಹಣವನ್ನು ಸಂಸ್ಥೆಯ ಚಟುವಟಿಕೆಗಳಿಗೆ ತರುವ ನಿರೀಕ್ಷೆ ಇದೆ.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ನಿಶ್ಚಲ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕಿ ಪಲ್ಲವಿ ಹೊನ್ನಾಪುರ, ಸಯ್ಯದ್ ಫತೀನ್ ಅಹಮದ್ ತಂದೆ ಡಾ. ಸಯ್ಯದ್ ಜಮೀರ್ ಅಹಮದ್, ತಾಯಿ ಅಸ್ಮಾ ಕೌಸರ್, ನವೋದಯ ವಿದ್ಯಾಲಯದ ಉಪನ್ಯಾಸಕರು ಉಪಸ್ಥಿತರಿದ್ದರು.