ಹೊಸದಿಗಂತ ಡಿಜಿಟಲ್ ಡೆಸ್ಕ್:
ನವೆಂಬರ್ 23ರಂದು ಪ್ರಧಾನಿ ನರೇಂದ್ರ ಮೋದಿ ಮಥುರಾದ ಶ್ರೀ ಕೃಷ್ಣಜನ್ಮಭೂಮಿಗೆ ಭೇಟಿ ನೀಡುತ್ತಿದ್ದಾರೆ.
ಶ್ರೀ ಕೃಷ್ಣನ ಪರಮ ಭಕ್ತೆ ಸಂತ ಮೀರಾಬಾಯಿ ಅವರ 525 ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಸಂಜೆ 4.30ಕ್ಕೆ ಉತ್ತರ ಪ್ರದೇಶದ ಮಥುರಾದಲ್ಲಿ ಸಂತ ಮೀರಾಬಾಯಿ ಅವರ 525ನೇ ಜನ್ಮ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿರುವ ‘ಸಂತ ಮೀರಾಬಾಯಿ ಜನ್ಮೋತ್ಸವ’ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ವೇಳೆ ಮೋದಿ, ಸಂತ ಮೀರಾ ಬಾಯಿ ಅವರ ಸ್ಮರಣಾರ್ಥ ಅಂಚೆ ಚೀಟಿ ಮತ್ತು ನಾಣ್ಯವನ್ನೂ ಬಿಡುಗಡೆ ಮಾಡಲಿದ್ದಾರೆ.
ಜೊತೆಗೆ ಆಯೋಜಿಸಲಾಗಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲೂ ಮೋದಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದೊಂದಿಗೆ ಸಂತ ಮೀರಾಬಾಯಿ ಅವರ ಸ್ಮರಣಾರ್ಥ ವರ್ಷವಿಡೀ ಕಾರ್ಯಕ್ರಮಗಳಿಗೆ ಚಾಲನೆ ಸಿಗಲಿದೆ.
ಪ್ರಧಾನಿ ಮೋದಿ ಶ್ರೀಕೃಷ್ಣಜನ್ಮಭೂಮಿಗೂ ಭೇಟಿ ನೀಡಲಿದ್ದಾರೆ. ಬಂಕೇ ಬಿಹಾರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಶ್ರೀ ಕೃಷ್ಣ ಜನ್ಮಭೂಮಿಗೆ ಭೇಟಿ ನೀಡುತ್ತಿರುವ ಮೊದಲ ಪ್ರಧಾನಿ ಅನ್ನೋ ಹೆಗ್ಗಳಿಕೆಗೂ ಮೋದಿ ಪಾತ್ರರಾಗಿದ್ದಾರೆ.
2001ರಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮಥುರಾ ಜಿಲ್ಲೆಯ ನಾಗ್ಲಾ ಚಂದಾಬನ್ ಗ್ರಾಮಕ್ಕೆ ಭೇಟಿ ನೀಡಿದ್ದರು. ಸಮಗ್ರ ರೋಜ್‌ಗಾರ್ ಯೋಜನೆಗೆ ಚಾಲನೆ ನೀಡಲು ಭೇಟಿ ನೀಡಿದ್ದರು. ಬಳಿಕ ದೆಹಲಿಗೆ ಮರಳಿದ್ದರು. ಆದರೆ ಶ್ರೀ ಕೃಷ್ಣಜನ್ಮಭೂಮಿಗೆ ಭೇಟಿ ನೀಡಿರಲಿಲ್ಲ.
ಮೋದಿ ಮಥುರಾ ಭೇಟಿ ಹಿನ್ನಲೆ ಭರ್ಜರಿ ತಯಾರಿ ನಡೆಯುತ್ತಿದೆ. ಇತ್ತ ಶ್ರೀಕೃಷ್ಣ ಜನ್ಮಭೂಮಿ ದೇವಸ್ಥಾನ ಸೇರಿದಂತೆ ಹಲವು ಭಾಗದಲ್ಲಿ ಹೂವು ತೋರಣಗಳಿಂದ ಅಲಂಕಾರ ಮಾಡಲಾಗಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಪ್ರಧಾನಿ ಮೋದಿಯನ್ನು ಬರಮಾಡಿಕೊಳ್ಳಲಿದ್ದಾರೆ.