ಹೊಸದಿಗಂತ ಡಿಜಿಟಲ್ ಡೆಸ್ಕ್:
ಶೃಂಗೇರಿಯ ಹೊಳೆಕೊಪ್ಪದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ತಾಲೂಕಾ ಮಟ್ಟದ ಕ್ರೀಡಾ ಕೂಟ ಕಾರ್ಯಕ್ರಮದಲ್ಲಿ ಶೃಂಗೇರಿಯ ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಭಾಗವಾದ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಜಿ ಮೊಬೈಲ್ ಆಸ್ಪತ್ರೆಯು ಉಚಿತ ಆರೋಗ್ಯ ಸೇವೆಯನ್ನು ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದಲ್ಲಿ 400 ಕ್ಕೂ ಅಧಿಕ ಜನರು ಭಾಗವಹಿಸಿ ಆರೋಗ್ಯ ತಪಾಸಣೆಯ ಲಾಭವನ್ನು ಪಡೆದುಕೊಂಡರು.

ಸೆ. 7 ರಿಂದ 9ರವರೆಗೆ 3 ದಿನಗಳ ಕಾಲ ನಡೆದ ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಜಿ ಮೊಬೈಲ್ ಆಸ್ಪತ್ರೆಯು ಉಚಿತ ಆರೋಗ್ಯ ಶಿಬಿರವು ವಿಶೇಷ ಗಮನ ಸೆಳೆಯಿತು. ಕಾರ್ಯಕ್ರಮವನ್ನು ಶೃಂಗೇರಿ ಶಾಸಕ ಟಿ ಡಿ ರಾಜೇಗೌಡ ಅವರು ಸ್ವತಃ ಆರೋಗ್ಯ ತಪಾಸಣೆಗೆ ಒಳಗಾಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಶ್ರೀ ಶಾರದಾ ಪೀಠದ ಹಣಕಾಸು ವಿಭಾಗದ ಜನರಲ್ ಮ್ಯಾನೇಜರ್ ಹೆಚ್.ಸಿ ಸತೀಶ್ ಕೂಡ ಉಪಸ್ಥಿತರಿದ್ದರು.

ಉಚಿತ ಆರೋಗ್ಯ ಶಿಬಿರದ ಕುರಿತು ಮಾತನಾಡಿದ ಅಭಿನವ ವಿದ್ಯಾತೀರ್ಥ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ. ಲಕ್ಷ್ಮೀ ರಾಘವ್ ‘ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಜಿ ಮೊಬೈಲ್ ಆಸ್ಪತ್ರೆಯ ಉಚಿತ ಆರೋಗ್ಯ ಸೇವೆಯು ಶೃಂಗೇರಿ ಹಾಗೂ ಸುತ್ತಮುತ್ತಲಿನ ಭಾಗದಲ್ಲಿ ಆರೋಗ್ಯ ಸೇವೆಯನ್ನು ಜನರಿಗೆ ಮತ್ತಷ್ಟು ಹತ್ತಿರವಾಗಿಸಿದ್ದಲ್ಲದೇ, ಸುತ್ತಮುತ್ತಲಿನ ಗ್ರಾಮದಲ್ಲಿ ಆರೋಗ್ಯ ಜಾಗೃತಿಯನ್ನೂ ಹೆಚ್ಚಿಸಿದೆ’ಎಂದು ಸಂತಸ ವ್ಯಕ್ತಪಡಿಸಿದರು.

ಉಚಿತ ಆರೋಗ್ಯ ಶಿಬಿರದಲ್ಲಿ ಶಿಕ್ಷಕರು, ಕ್ರಿಡಾಪಟುಗಳು, ವಿದ್ಯಾರ್ಥಿಗಳ ಪೋಷಕರು, ಗ್ರಾಮಸ್ಥರು ಭಾಗವಹಿಸಿ ಆರೋಗ್ಯ ಸೇವೆಯ ಪ್ರಯೋಜನವನ್ನು ಪಡೆದುಕೊಂಡರು. ಸೆ. 8 ರಂದು ವಿಶ್ವ ಫಿಸಿಯೋಥೆರಪಿ ದಿನದ ಅಂಗವಾಗಿ ಶೇ. 100 ರಷ್ಟು ಉಚಿತವಾಗಿ ಫಿಸಿಯೋಥೆರಪಿ ಚಿಕಿತ್ಸೆ ಕೂಡ ನೀಡಲಾಯಿತು. ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಡಾ. ಪ್ರವೀಣ್, ಡಾ. ಅನುಪಮಾ, ಡಾ. ಭೂಮಿಕಾ, ಡಾ. ಪಲ್ಲವಿ, ಡಾ. ಶಿಲ್ಪಾ ಮುಂತಾದವರು ಆರೋಗ್ಯ ಸೇವೆಯನ್ನು ಒದಗಿಸಿದರು. ಶಿಬಿರದಲ್ಲಿ ಸ್ತ್ರೀರೋಗ, ಆರ್ಥೊಪೆಡಿಕ್ ಸೇರಿ ಹಲವು ಆರೋಗ್ಯ ಸಮಸ್ಯೆಗಳಿಗೆ ವೈದ್ಯರು ಸೂಕ್ತ ಚಿಕಿತ್ಸೆ, ಸಲಹೆಗಳನ್ನು ಒದಗಿಸಿದರು. ಇನ್ನು ಕಾರ್ಯಕ್ರಮದಲ್ಲಿ, ಎಕ್ಸ್‌ರೇ, ಐವಿ ಡ್ರಿಪ್, ನೆರವು ಸೇರಿ ಗಾಯಗೊಂಡ ಕ್ರೀಡಾಪಟುಗಳಿಗೆ ತ್ವರಿತ ಚಿಕಿತ್ಸಾ ಸೌಲಭ್ಯಗಳನ್ನೂ ಒದಗಿಸಲಾಯಿತು.



