ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಳ್ಳಾರಿಯ ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವಿನ ವಿಷಯ ಇಡೀ ರಾಜ್ಯಕ್ಕೇ ಹರಡಿದೆ. ಗರ್ಭಿಣಿಯರು ಕೇವಲ ಚೆಕಪ್‌ಗಾಗಿಯೂ ಆಸ್ಪತ್ರೆಗೆ ಹೋಗೋದಕ್ಕೆ ಭಯ ಪಡುತ್ತಿದ್ದಾರೆ. ಕೊಂಚ ಹಣ ಖರ್ಚಾದರೂ ಪರವಾಗಿಲ್ಲ ಪ್ರೈವೇಟ್ ಆಸ್ಪತ್ರೆಗೆ ಹೋಗಬೇಕು ಎಂದುಕೊಳ್ಳುತ್ತಿದ್ದಾರೆ.
ಇದನ್ನೇ ಬಂಡವಾಳವಾಗಿಟ್ಟುಕೊಂಡಿರುವ ಪ್ರೈವೇಟ್ ಆಸ್ಪತ್ರೆಗಳು ವಸೂಲಿಗೆ ಇಳಿದಿವೆ. ಕೆಲ ಖಾಸಗಿ ಆಸ್ಪತ್ರೆಗಳು ಗರ್ಭಿಣಿಯರ ದಾಖಲಾತಿಗೆ ದರ ಹೆಚ್ಚಿಸುವ ಮೂಲಕ ರೋಗಿಗಳನ್ನು ಸುಲಿಗೆ ಮಾಡಲು ಶುರು ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಬಿಮ್ಸ್ ವೈದ್ಯರು ಮತ್ತು ಸಿಬ್ಬಂದಿ ರೋಗಿಗಳಿಗೆ ನಿಷೇಧಿತ ಐವಿ ದ್ರವವನ್ನು ನೀಡಿದ ನಂತರ ಐದು ಸಾವುಗಳು ಸಂಭವಿಸಿವೆ ಎಂದು ಹೇಳಲಾಗಿದೆ. ಈ ಘಟನೆ ನಂತರ ಬಿಮ್ಸ್ ಮತ್ತಿತರ ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದ ಅನೇಕ ರೋಗಿಗಳು ಕಳೆದ 15 ದಿನಗಳಿಂದ ಖಾಸಗಿ ಆಸ್ಪತ್ರೆಗಳಿಗೆ ಸ್ಥಳಾಂತರಗೊಂಡಿದ್ದಾರೆ.
ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿರುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಜಿಲ್ಲಾಡಳಿತ ಕೂಡಲೇ ಕ್ರಮ ಕೈಗೊಂಡು ರೋಗಿಗಳಿಗೆ ಸುಲಿಗೆ ಮಾಡದಂತೆ ನೋಡಿಕೊಳ್ಳಬೇಕು ಎಂದು ಗರ್ಭಿಣಿಯರ ಪೋಷಕರು ಹಾಗೂ ಸಂಬಂಧಿಕರು ಆಗ್ರಹಿಸಿದ್ದಾರೆ.