ವಯನಾಡಿನಲ್ಲಿ ಪ್ರಿಯಾಂಕಾ ಗಾಂಧಿ ಭರ್ಜರಿ ಪ್ರಚಾರ: ಮದರ್ ತೆರೇಸಾ ಹೇಳಿದ ಮಾತು ನೆನಪಿಸಿಕೊಂಡ ಕಾಂಗ್ರೆಸ್ ನಾಯಕಿ!

ಹೊಸದಿಗಂತ ಡಿಜಿಟಲ್ ಡೆಸ್ಕ್; 

ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಪ್ರಿಯಾಂಕಾ ಗಾಂಧಿ ವಾದ್ರಾ ಸ್ಪರ್ಧೆ ಮಾಡುತ್ತಿದ್ದು,. ವಯನಾಡಿನಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ.

ಪ್ರಚಾರದ ಸಮಯ ಮದರ್ ತೆರೇಸಾ ಬಂದಿದ್ದ ಘಟನೆಯನ್ನು ನೆನಪು ಮಾಡಿಕೊಂಡ ಅವರು, ತಂದೆ ರಾಜೀವ್ ಗಾಂಧಿ ನಿಧನದ ಕೆಲ ತಿಂಗಳ ನಂತರ ಚುನಾವಣೆಯೊಂದರ ಬೈಠಕ್‌ಗಾಗಿ ಮದರ್ ತೆರೇಸಾ ನಮ್ಮ ಮನೆಗೆ ಬಂದಿದ್ದರು. ಅಂದು ನನಗೆ ನಿರ್ಗತಿಕರ ಪರವಾಗಿ ಕೆಲಸ ಮಾಡುವಂತೆ ಹೇಳಿದ್ದರು ಎಂದು ತಿಳಿಸಿದರು.

ಇಲ್ಲಿಯ ಜನತೆ ನೀಡಿದ ಪ್ರೀತಿ ನನ್ನಲ್ಲಿಯ ಉತ್ಸಾಹವನ್ನು ಹೆಚ್ಚಿಸಿದೆ. ಕೆಲ ದಿನಗಳ ಹಿಂದೆ ನಾಮಪತ್ರ ಸಲ್ಲಿಕೆ ಮಾಡಲು ಇಲ್ಲಿಗೆ ಬಂದಾಗ ಮಾರ್ಗಮಧ್ಯೆ ಜನರೊಂದಿಗೆ ಮಾತನಾಡಿದೆ. ಅದರಲ್ಲೊಬ್ಬರು ಸೇನೆಯಲ್ಲಿ ಕೆಲಸ ಮಾಡುತ್ತಿದ್ದರು. ನನ್ನ ತಾಯಿಗೆ ನಿಮ್ಮನ್ನು ಭೇಟಿಯಾಗಿ ಮಾತನಾಡಬೇಕೆಂಬ ಆಸೆ ಇದೆ. ಆದ್ರೆ ವಯಸ್ಸು ಆಗಿರುವ ಕಾರಣ ಅವರಿಗೆ ನಡೆಯಲು ಸಾಧ್ಯವಿಲ್ಲ ಎಂದರು. ಹಾಗಾಗಿ ನಾನೇ ಅವರ ತಾಯಿ ಭೇಟಿಗೆ ತೆರಳಿದೆ. ಅವರು ನನ್ನನ್ನು ಪುಟ್ಟ ಮಗುವಿನಂತೆ ತಬ್ಬಿಕೊಂಡರು. ಅಂದು ನನ್ನ ತಾಯಿ ಮತ್ತು ಅವರ ಅಪ್ಪುಗೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬರಲಿಲ್ಲ. ಆಗ ವಯನಾಡಿನಲ್ಲಿ ನನ್ನೊಂದಿಗೆ ಅಮ್ಮ ಇದ್ದಾರೆ ಎಂದು ಅನ್ನಿಸಿತು ಎಂದು ಭಾವುಕ ಮಾತುಗಳನ್ನಾಡಿದರು.

ನನ್ನ ತಂದೆ ರಾಜೀವ್ ಗಾಂಧಿ ನಿಧನದ ನಂತರ ಆರೇಳು ತಿಂಗಳ ನಂತರ ಮದರ್ ತೆರೇಸಾ ನಮ್ಮ ಮನೆಗೆ ಬಂದಿದ್ದರು. ಅಂದು ನನಗೆ ಜ್ವರ ಇದ್ದಿದ್ರಿಂದ ಕೋಣೆಯಿಂದ ನಾನು ಹೊರಗೆ ಹೋಗಿರಲಿಲ್ಲ. ಆದ್ರೆ ಮದರ್ ತೆರೇಸಾ ಅವರೇ ಕೋಣೆಗೆ ಬಂದು ನನ್ನ ತಲೆ ಮೇಲೆ ಕೈ ಇರಿಸಿದರು. ನಂತರ ನನ್ನ ಕೈ ಹಿಡಿದು, ಗುಲಾಬಿ ಹೂ ನೀಡಿದರು. ಆ ಬಳಿಕ ನನ್ನೊಂದಿಗೆ ಕೆಲಸ ಮಾಡುವೆಯಾ ಎಂದು ಕೇಳಿದರು. ಇದಾದ 5-6 ವರ್ಷದ ನಂತರ ನನ್ನ ಸಂಬಂಧಿ ಸೋದರಿಯರೊಂದಿಗೆ ಕೆಲಸ ಮಾಡಲು ತೆರಳಿದೆ. ಮಕ್ಕಳಿಗೆ ಓದಿಸೋದು, ಶೌಚಾಲಯಗಳನ್ನು ಸ್ವಚ್ಛಗೊಳಿಸೋದು ಮತ್ತು ಅಡುಗೆ ತಯಾರಿಸೋದು ನನ್ನ ಕೆಲಸವಾಗಿತ್ತು. ಈ ಕೆಲಸದಿಂದ ನಾನು ಜನರ ಕಷ್ಟಗಳನ್ನು ತಿಳಿದುಕೊಂಡು, ಸೇವೆಯ ನಿಜವಾದ ಅರ್ಥ ಏನು ಎಂಬುದನ್ನು ತಿಳಿದುಕೊಂಡೆ ಎಂದು ತಮ್ಮ ಜೀವನದಲ್ಲಿ ನಡೆದ ಘಟನೆಗಳನ್ನು ವಯನಾಡಿನ ಜನತೆಯೊಂದಿಗೆ ಹಂಚಿಕೊಂಡರು.

ವಯನಾಡಿನಲ್ಲಿ ಭೂಕುಸಿತದ ಸಂದರ್ಭ ಎಲ್ಲಾ ಸಮುದಾಯಗಳು ಹೇಗೆ ಪರಸ್ಪರ ಸಹಾಯ ಮಾಡಿವೆ ಎಂಬುದನ್ನು ಗಮನಿಸಿದ್ದೇನೆ. ನೀವೆಲ್ಲರೂ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಿದ್ದೀರಿ. ಧೈರ್ಯಶಾಲಿಗಳಾಗಿರುವ ನಿಮ್ಮನ್ನು ನೋಡಲು ನನಗೆ ಹೆಮ್ಮೆಯಾಗುತ್ತದೆ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದರು.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!