ಹೊಸದಿಗಂತ ವರದಿ,ಅಂಕೋಲಾ:
ತಾಲೂಕಿನ ಹಟ್ಟಿಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಳೆ ಗ್ರಾಮದಲ್ಲಿ ಕಳೆದ ಎರಡು ತಿಂಗಳುಗಳಿಂದ ವಿದ್ಯುತ್ ಇಲ್ಲದೇ ಗ್ರಾಮಸ್ಥರು ತೀವ್ರ ಸಮಸ್ಯೆ ಎದುರಿಸುತ್ತಿದ್ದು ಹಲವು ಬಾರಿ ಈ ಕುರಿತು ಸಂಬಂಧಿಸಿದವರ ಗಮನಕ್ಕೆ ತಂದರೂ ಯಾವುದೇ ರೀತಿಯ ಪ್ರಯೋಜನ ಆಗದ ಕಾರಣ ಹೆಸ್ಕಾಂ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಿ ಹೆಸ್ಕಾಂ ಅಧಿಕಾರಿಗಳಿಗೆ ಮತ್ತು ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸುಮಾರು ಎರಡು ತಿಂಗಳುಗಳ ಕಾಲ ವಿದ್ಯುತ್ ಸಂಪರ್ಕ ಇಲ್ಲದೆ ಕತ್ತಲಲ್ಲೇ ಕಾಲ ಕಳೆಯುವಂತಾಗಿದ್ದು ಶಾಲಾ ವಿದ್ಯಾರ್ಥಿಗಳ ಅಭ್ಯಾಸಕ್ಕೆ
ಮತ್ತು ಗ್ರಾಮಸ್ಥರ ಕೆಲಸ ಕಾರ್ಯಗಳಿಗೆ ತೀವ್ರ ತೊಂದರೆ ಆಗುತ್ತಿದೆ ಆದ್ದರಿಂದ ಕೂಡಲೇ ವಿದ್ಯುತ್ ಸಮಸ್ಯೆಯನ್ನು ಸರಿಪಡಿಸಲು ಸಂಬಂಧಿಸಿದವರು ಗಮನ ಹರಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಹೆಸ್ಕಾಂ ವತಿಯಿಂದ ಮನವಿ ಸ್ವೀಕರಿಸಿದ ಶಾಖಾಧಿಕಾರಿ ವಿಶ್ವನಾಥ ನಾಯ್ಕ ಮಾತನಾಡಿ ಮಳೆ ಗಾಳಿ ಕಾರಣದಿಂದ ಕಂಬಗಳು ಮುರಿದು ಸಮಸ್ಯೆ ಆಗಿದ್ದು ಕೂಡಲೇ ಸರಿಪಡಿಸಿ ಸಂಪರ್ಕ ನೀಡುತ್ತವೆ ಎಂದು ಭರವಸೆ ನೀಡಿದರು.
ಪ್ರಮುಖರುಗಳಾದ ರಾಘವೇಂದ್ರ ನಾಯ್ಕ, ಪಾಂಡು ಗೌಡ, ಪಾಂಡುರಂಗ ಗೌಡ, ಸುರೇಶ ಗೌಡ ರಾಜು ಗೌಡ,ದಿಗಂಬರ ಗೌಡ, ಲೋಕು ಗೌಡ ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.
ನ್ಯಾಯವಾದಿ ಉಮೇಶ ನಾಯ್ಕ ಬೆಂಬಲ ವ್ಯಕ್ತಪಡಿಸಿ ಕೂಡಲೇ ವಿದ್ಯುತ್ ಸಂಪರ್ಕಕ್ಕೆ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದರು.
ತಹಶೀಲ್ಧಾರರ ಕಾರ್ಯಾಲಯಕ್ಕೆ ಆಗಮಿಸಿದ ಗ್ರಾಮಸ್ಥರು ತಾಲೂಕು ದಂಡಾಧಿಕಾರಿಗಳಿಗೆ ಮನವಿ ಅರ್ಪಿಸಿದರು.