Monday, October 2, 2023

Latest Posts

ಇನ್ನು 11 ತಿಂಗಳಲ್ಲಿ ಬೆಂಗಳೂರಲ್ಲೇ ಐಫೋನ್‌ ಉತ್ಪಾದನೆ: ಸಚಿವ ಎಂ.ಬಿ ಪಾಟೀಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

2024ರ ಏಪ್ರಿಲ್ 1ರ ವೇಳೆಗೆ ಬೆಂಗಳೂರಿನ ದೇವನಹಳ್ಳಿ ಐಫೋನ್ ತಯಾರಿಕಾ ಕಂಪನಿ ಫಾಕ್ಸ್ ಕಾನ್ ಉತ್ಪಾದನೆ ಆರಂಭಿಸಲಿದೆ ಎಂದು ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಗುರುವಾರ ಹೇಳಿದ್ದಾರೆ.

ಜಾರ್ಜ್ ಚು ಅವರ ನೇತೃತ್ವದಲ್ಲಿ ಫಾಕ್ಸ್ ಕಾನ್ ಕಂಪನಿಯ ಉನ್ನತ ಅಧಿಕಾರಿಗಳ ತಂಡವು ಸೌಜನ್ಯದ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರು ಹೇಳಿದ್ದಾರೆ. ಈ ವರ್ಷದ ಜುಲೈ 1ರ ಹೊತ್ತಿಗೆ ಪೂರ್ತಿಯಾಗಿ ಭೂಮಿಯನ್ನು ಕಂಪನಿಗೆ ಹಸ್ತಾಂತರಿಸುವುದಾಗಿ ಹೇಳಿದರು.
ಇದರೊಂದಿಗೆ ಕಾಂಗ್ರೆಸ್ ನೇತೃತ್ವದ ಹೊಸ ಸರ್ಕಾರವು 50,000 ಜನರಿಗೆ ಉದ್ಯೋಗ ಒದಗಿಸುವ 13,600 ಕೋಟಿ ರೂ. ಮೊತ್ತದ ಈ ಯೋಜನೆಯತ್ತ ಗಮನಹರಿಸಿದೆ.

ದೇವನಹಳ್ಳಿ ಸಾಮಾನ್ಯ ಕೈಗಾರಿಕಾ ಪ್ರದೇಶದಲ್ಲಿ (ಐಟಿಐಆರ್) ಕಾರ್ಯಯೋಜನೆಗಾಗಿ 300 ಎಕರೆ ಗುರುತಿಸಲಾಗಿದೆ. 2024ರ ಏಪ್ರಿಲ್ 1ರ ವೇಳೆಗೆ ಇಲ್ಲಿ ಕಂಪನಿಯು ತಯಾರಿಕೆ ಶುರು ಮಾಡುವ ಗುರಿ ಹಾಕಿಕೊಂಡಿದೆ. ಇದನ್ನು ಗಮನದಲ್ಲಿರಿಸಿಕೊಂಡು ಜುಲೈ 1ಕ್ಕೆ ಮುಂಚೆ ಕಂಪನಿಗೆ ಭೂಮಿ ಹಸ್ತಾಂತರಿಸಲಾಗುವುದು.

ಕಂಪನಿಯು ದಿನಕ್ಕೆ 50 ಲಕ್ಷ ಲೀಟರ್ ನೀರು ಬೇಕಾಗುವುದಾಗಿ ತಿಳಿಸಿದೆ.‌ ಇದನ್ನು ಪೂರೈಸುವ ಜೊತೆಗೆ ಗುಣಮಟ್ಟದ ವಿದ್ಯುತ್, ರಸ್ತೆ ಸಂಪರ್ಕ ಇತ್ಯಾದಿ ಮೂಲಸೌಕರ್ಯಗಳನ್ನು ಒದಗಿಸಲಾಗುತ್ತದೆ. ಕಂಪನಿಯ ಸಿಬ್ಬಂದಿಗೆ ಬೇಕಾಗುವ ಕೌಶಲ ವಿವರಗಳನ್ನು ಕೂಡ ಕೇಳಲಾಗಿದೆ. ಅದಕ್ಕೆ ತಕ್ಕಂತೆ ಸರ್ಕಾರದ ವತಿಯಿಂದ ಅರ್ಹರಿಗೆ ಕೌಶಲಗಳ ತರಬೇತಿ ಕೊಟ್ಟು ಮಾನವ ಸಂಪನ್ಮೂಲ ಲಭ್ಯವಾಗಿಸಲು ಒತ್ತು ಕೊಡಲಾಗುವುದು.

ತೈವಾನ್ ಮೂಲದ ಮುಂಚೂಣಿ ಕಂಪನಿಯು ಮೂರು ಹಂತಗಳಲ್ಲಿ ಘಟಕ ನಿರ್ಮಾಣ ಪೂರೈಸಿ ಅಂತಿಮವಾಗಿ ಇಲ್ಲಿ ವರ್ಷಕ್ಕೆ 2 ಕೋಟಿ ಮೊಬೈಲ್‌ಗಳನ್ನು ತಯಾರಿಸುವ ಯೋಜನೆ ಹಾಕಿಕೊಂಡಿದೆ‌. ಈಗಾಗಲೇ ಭೂಮಿಗಾಗಿ ನಿಗದಿಗೊಳಿಸಿರುವ ಮೊತ್ತದಲ್ಲಿ ಶೇಕಡ 30ರಷ್ಟನ್ನು (90 ಕೋಟಿ ರೂ.) ಕಂಪನಿಯು ಕೆ.ಐ.ಎ‌.ಡಿ.ಬಿ.ಗೆ ಪಾವತಿಸಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!