ಆರ್.ಕೆ.ಬಾಲಚಂದ್ರರಿಗೆ ಪ್ರೊ.ಎಚ್.ಎಸ್.ಕೆ. ಶತಮಾನೋತ್ಸವ ಪ್ರಶಸ್ತಿ

ಹೊಸದಿಗಂತ ವರದಿ, ಮಡಿಕೇರಿ
ಮಡಿಕೇರಿಯ ಲೀಡ್ ಬ್ಯಾಂಕ್ ಪ್ರಬಂಧಕರಾಗಿರುವ, ಲೇಖಕ ಆರ್.ಕೆ.ಬಾಲಚಂದ್ರ ಅವರಿಗೆ ಈ ಸಾಲಿನ ಪ್ರತಿಷ್ಠಿತ ಪ್ರೊ.ಎಚ್.ಎಸ್. ಕೆ ಶತಮಾನೋತ್ಸವ ಪ್ರಶಸ್ತಿ ಲಭಿಸಿದೆ.
ಮೈಸೂರು ಜಿಲ್ಲೆಯ ಕೆ.ಆರ್.ನಗರದ ಗ್ರಾಮಾಂತರ ಬುದ್ದಿಜೀವಿಗಳ ಬಳಗ, ಪ್ರಗತಿಪರ ಪ್ರಕಾಶನ ಮತ್ತು ಭಾರತೀಯ ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಪರಿಷತ್ ವತಿಯಿಂದ ಈ ಪ್ರಶಸ್ತಿಯನ್ನು ಬಾಲಚಂದ್ರ ಅವರಿಗೆ ಏಪ್ರಿಲ್ 17 ರಂದು ಮೈಸೂರಿನಲ್ಲಿ ಪ್ರದಾನ ಮಾಡಲಾಗುತ್ತಿದೆ.
ಶಿರಸಿ ಮೂಲದ ಆರ್.ಕೆ.ಬಾಲಚಂದ್ರ 38 ವರ್ಷಗಳಿಂದ ಬ್ಯಾಂಕಿಂಗ್ ಸೇವೆಯಲ್ಲಿದ್ದು, ಪ್ರಸ್ತುತ ಮಡಿಕೇರಿಯ ಲೀಡ್ ಬ್ಯಾಂಕ್ ಪ್ರಬಂಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕನ್ನಡದಲ್ಲಿ ಹಾಗೂ ಬಡ ಮಕ್ಕಳ ಉದ್ಯೋಗಕ್ಕೆ ಸಂಬಂಧಿಸಿದಂತೆ ವಿಶೇಷ ಆಸಕ್ತಿ ವಹಿಸಿ ರಾಜ್ಯಾದ್ಯಂತ ಉಚಿತ ತರಬೇತಿಯ ಸಂಘಟನೆ ಮಾಡಿರುವ ಬಾಲಚಂದ್ರ ಅವರು ಈವರೆಗೆ 9 ಕೃತಿಗಳನ್ನು ರಚಿಸಿದ್ದಾರೆ.
ಸಾಹಿತ್ಯದ ಜೊತೆಗೆ ಗ್ರಾಮೀಣ ಅಭಿವೃದ್ಧಿ, ಕೃಷಿ, ಮಹಿಳಾ ಸಬಲೀಕರಣ, ಸಂಶೋಧನೆ, ನಿರುದ್ಯೋಗ ನಿವಾರಣೆ, ಅಕ್ಷರ ಕಲಿಕೆ, ಬರಹದ ಮೂಲಕ ಬ್ಯಾಂಕಿಂಗ್ ಜಾಗೃತಿ, ಚಟುವಟಿಕೆಗಳನ್ನೂ ಹಮ್ಮಿಕೊಂಡಿದ್ದಾರೆ.
ಕಳೆದ 38 ವರ್ಷಗಳಿಂದ ಬ್ಯಾಂಕ್ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ರಾಜ್ಯದ ಸುಮಾರು ನಾಲ್ಕೂವರೆ ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡಿದ ಹಿರಿಮೆ ಹೊಂದಿರುವ ಇವರ ತರಬೇತಿ ಉಪಯೋಗ ಪಡೆದ 50,000 ಕ್ಕೂ ಹೆಚ್ಚು ಉದ್ಯೋಗಾಂಕ್ಷಿಗಳು ಸರಕಾರಿ/ ಅರೆ ಸರಕಾರಿ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ಉದ್ಯೋಗ ಪಡೆದುಕೊಂಡು ಬದುಕನ್ನು ಕಟ್ಟಿಕೊಂಡಿದ್ದಾರೆ.
ಹಳ್ಳಿಗಳಲ್ಲಿ ‘ರಾತ್ರಿಪಾಠ’ಗಳನ್ನು ಪ್ರಾರಂಭಿಸುವ ಮೂಲಕ ಒಂದೆಡೆ ಜನರನ್ನು ಬ್ಯಾಂಕಿಂಗ್ ವಿಚಾರಗಳ ಬಗ್ಗೆ ಜಾಗೃತಗೊಳಿಸಿದ ಬಾಲಚಂದ್ರ, ತಾವು ಕೆಲಸ ಮಾಡಿದ ಕಡೆಯಲ್ಲೆಲ್ಲಾ ಸ್ಥಳೀಯ ಪತ್ರಿಕೆಗಳಲ್ಲಿ ಕನ್ನಡದಲ್ಲಿ ಬ್ಯಾಂಕಿಂಗ್ ವಿಷಯಗಳನ್ನು ಕುರಿತು ಲೇಖನಗಳನ್ನು ಬರೆಯುವ ಕಾಯಕವನ್ನು 1984 ರಿಂದಲೇ ಪ್ರಾರಂಭಿಸಿದ್ದಾರೆ. ಇವರ ತರಬೇತಿ ಮೂಲಕ ಬ್ಯಾಂಕಿಂಗ್ ಕೆಲಸವನ್ನು ಮೆಚ್ಚಿದ ಕಾರ್ಪೋರೇಷನ್ ಬ್ಯಾಂಕ್ 1990 ರಲ್ಲಿಯೇ ರಾಜ್ಯ ಮಟ್ಟದಲ್ಲಿ ‘ಸೋಶಿಯಲ್ ಬ್ಯಾಂಕಿಂಗ್ ಹೀರೋ’ ಎಂಬ ಒಂದು ವಿಶೇಷ ಸುತ್ತೋಲೆಯ ಮೂಲಕ ಇವರ ಕೆಲಸವನ್ನು ಪ್ರಶಂಸಿಸಿದೆ.
ಸರಕಾರಿ ಉದ್ಯೋಗದ ಕನಸು ಕಾಣುವ ಅಭ್ಯರ್ಥಿಗಳಿಗೆ ಸರಕಾರಿ ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ ‘ಗೌರ್ಮೆಂಟ್ ಜಾಬ್ ಪಡೆಯುವುದು ಹೇಗೆ?’ ಎಂಬ ಪ್ರಥಮ ಕನ್ನಡ ಪುಸ್ತಕವನ್ನೂ ಬಾಲಚಂದ್ರ ರಚಿಸಿದ್ದಾರೆ. ಬಾಲಚಂದ್ರ ಅವರಿಗೆ ಸಮಾಜ ಸೇವೆಗೆಂದು ಮೀಸಲಾದ ಕೊಗ್ರೆಯ ಶಿಕ್ಷಣ ಪ್ರತಿಷ್ಠಾನದ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿ ಪಡೆದ ಮೊದಲ ಬ್ಯಾಂಕರ್ ಕೂಡಾ ಬಾಲಚಂದ್ರ ಅವರಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!