Thursday, February 29, 2024

ಕೇರಳದಲ್ಲಿ ಪ್ರಾಧ್ಯಾಪಕರ ಕೈ ಕತ್ತರಿಸಿದ ಪ್ರಕರಣ: ಪ್ರಮುಖ ಆರೋಪಿ NIA ವಶಕ್ಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

2010ರಲ್ಲಿ ಕೇರಳ ನಡೆದಿದ್ದ ಪ್ರಾಧ್ಯಾಪಕರೊಬ್ಬರ ಮುಂಗೈ ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸದಿಂತೆ ಪ್ರಮುಖ ಆರೋಪಿಯನ್ನು ಕೇಂದ್ರ ತನಿಖಾ ಸಂಸ್ಥೆ (NIA) ಬುಧವಾರ ಬಂಧಿಸಿದೆ.

ಬಂಧಿತ ಆರೋಪಿಯನ್ನು ಸಾವಾದ್ ಎಂದು ಗುರುತಿಸಲಾಗಿದೆ.

ಕೇರಳದ ಇಡುಕ್ಕಿ ಜಿಲ್ಲೆಯ ತೊಡುಪುಳದ ನ್ಯೂಮನ್‌ ಕಾಲೇಜಿನ ವಾಣಿಜ್ಯ ವಿಷಯ ಪ್ರಾಧ್ಯಾಪಕ ಪ್ರೊ.ಟಿ.ಜೆ. ಜೋಸೆಫ್‌ ಅವರ ಕೈಯನ್ನು 2010ರ ಜುಲೈ 4ರಂದು ಕತ್ತರಿಸಲಾಗಿತ್ತು.

ಬಿ.ಕಾಂ. ಸೆಮಿಸ್ಟರ್‌ ಪ್ರಶ್ನೆಪತ್ರಿಕೆಯಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡುವ ರೀತಿಯಲ್ಲಿ ಪ್ರಶ್ನೆ ಕೇಳಲಾಗಿದೆ ಎಂದು ನಿಷೇಧಿತ ತೀವ್ರಗಾಮಿ ಇಸ್ಲಾಮಿಕ್ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಬೆಂಬಲಿತರು ಕೃತ್ಯ ಎಸಗಿದ್ದರು. ಕಾನೂನು ಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ ಪ್ರಕರಣ ಕೈಗೆತ್ತಿಕೊಂಡಿದ್ದ ಎನ್‌ಐಎ, ಆರೋಪಿಗಳ ಬಂಧನಕ್ಕೆ ₹ 10 ಲಕ್ಷ ಬಹುಮಾನವನ್ನು ಘೋಷಿಸಿತ್ತು.

ಪ್ರಮುಖ ಆರೋಪಿ ಸಾವಾದ್‌ನನ್ನು ಕೇರಳದ ಉತ್ತರ ಭಾಗದ ಮಟ್ಟನ್ನೂರ್‌ನಿಂದ ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ 2015ರ ಮೇ 1ರಂದು 13 ಮಂದಿಯನ್ನು ಅಪರಾಧಿಗಳೆಂದು ಪರಿಗಣಿಸಿ ಎನ್‌ಐಎ ವಿಶೇಷ ನ್ಯಾಯಾಲಯ ಆದೇಶಿಸಿತ್ತು. ಇದೇ ಪ್ರಕರಣದಲ್ಲಿ ಭಾಗಿಯಾಗಿದ್ದರೆ ಎನ್ನಲಾದ ಇತರ 18 ಮಂದಿಯನ್ನು ಸೂಕ್ತ ಸಾಕ್ಷಾಧಾರಗಳಿಲ್ಲ ಎಂಬ ಕಾರಣಕ್ಕೆ ನ್ಯಾಯಾಧೀಶ ಪಿ. ಶಶಿಧರನ್‌ ಅವರು ಖುಲಾಸೆಗೊಳಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು, 30 ಪ್ರಾಸಿಕ್ಯೂಷನ್‌ ಸಾಕ್ಷಿಗಳು, ನಾಲ್ವರು ಪರ ಸಾಕ್ಷಿಗಳ ವಿಚಾರಣೆ ನಡೆಸಿತ್ತು. ಅಂತಿಮವಾಗಿ ನ್ಯಾಯಾಲಯ 13 ಮಂದಿಯನ್ನು ಅಪರಾಧಿಗಳೆಂದು ಘೋಷಿಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!