August 2, 2026
Sunday, August 2, 2026
spot_img

ಸರಿಯಾದ ನಿದ್ದೆಯೇ ಯೋಗ ಸಮಾಧಿ; ಡಿನ್ನರ್ ನಮ್ಮ ಸಂಸ್ಕೃತಿಯಲ್ಲ: ರಾಘವೇಶ್ವರ ಶ್ರೀ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಹಾರ ಮತ್ತು ನಿದ್ದೆ ಪರಸ್ಪರ ಸಂಬಂಧ ಹೊಂದಿದ್ದು, ಉತ್ತಮ ಆರೋಗ್ಯಕ್ಕೆ ಎರಡೂ ಸಮಾನವಾಗಿ ಅಗತ್ಯ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಗೋಕರ್ಣದ ಅಶೋಕೆಯ ಮೂಲಮಠದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ ಧರ್ಮಸಭೆಯ ‘ಅನ್ನಂ ಬ್ರಹ್ಮ’ ಪ್ರವಚನ ಸರಣಿಯಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ನಿದ್ದೆ ಕೇವಲ ವಿಶ್ರಾಂತಿಯಲ್ಲ, ಅದು ಶರೀರ ಮತ್ತು ಮನಸ್ಸಿಗೆ ಹೊಸ ಚೈತನ್ಯ ತುಂಬುವ ದೈವಿಕ ಸ್ಥಿತಿ ಎಂದು ಹೇಳಿದರು. ಸರಿಯಾದ ಸಮಯದಲ್ಲಿ ಬರುವ ನಿದ್ದೆ ಆರೋಗ್ಯ, ಸುಖ ಹಾಗೂ ಹಲವು ಸಿದ್ಧಿಗಳನ್ನು ನೀಡುತ್ತದೆ ಎಂದರು.

ಮಲಗುವ ದಿಕ್ಕಿಗೂ ಮಹತ್ವ

ರಾತ್ರಿ ಮತ್ತು ಬೆಳಗಿನ ನಡುವಿನ ಎರಡು ಯಾಮಗಳು ನಿದ್ದೆಗೆ ಸೂಕ್ತವೆಂದು ಶಾಸ್ತ್ರಗಳು ಹೇಳುತ್ತವೆ. ಮಧ್ಯರಾತ್ರಿ ಸಮನಾಗುವಂತೆ ನಿದ್ದೆ ಮಾಡಿದರೆ ಅದು ‘ಯೋಗ ಸಮಾಧಿ’ ಎಂದು ಪರಿಗಣಿಸಲಾಗುತ್ತದೆ ಎಂದ ಶ್ರೀಗಳು, ಪೂರ್ವಕ್ಕೆ ತಲೆಹಾಕಿ ಮಲಗಿದರೆ ಸಂಪತ್ತು, ದಕ್ಷಿಣಕ್ಕೆ ಆಯುಷ್ಯ ವೃದ್ಧಿ, ಪಶ್ಚಿಮಕ್ಕೆ ಚಿಂತೆ ಹಾಗೂ ಉತ್ತರಕ್ಕೆ ತಲೆಹಾಕಿ ಮಲಗುವುದು ಶುಭವಲ್ಲ ಎಂದು ವಿವರಿಸಿದರು. ಮಲಗುವ ಮುನ್ನ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳುವುದು ಉತ್ತಮ ನಿದ್ದೆಗೆ ಅಗತ್ಯ ಎಂದರು.

‘ಡಿನ್ನರ್’ ನಮ್ಮ ಸಂಸ್ಕೃತಿಯಲ್ಲ

ಸೂರ್ಯಾಸ್ತದ ಸುಮಾರು ಒಂದು ಗಂಟೆಯೊಳಗೆ ಹಗುರವಾದ ಹಾಗೂ ಸುಲಭವಾಗಿ ಜೀರ್ಣವಾಗುವ ಆಹಾರ ಸೇವಿಸುವುದು ಆರೋಗ್ಯಕರ ಎಂದು ಶ್ರೀಗಳು ಹೇಳಿದರು. ರಾತ್ರಿ ಭೂರಿ ಭೋಜನ ಮಾಡುವುದು ಸೂಕ್ತವಲ್ಲ. ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ‘ಡಿನ್ನರ್’ ಹೆಸರಿನಲ್ಲಿ ತಡರಾತ್ರಿ ಊಟ ಮಾಡುವ ಪದ್ಧತಿ ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿಸಿದರು.

ಗುರಿಕಾರರಿಗೆ ಕರೆ

ಗುರಿಕಾರರ ದಿನದ ಅಂಗವಾಗಿ ರಾಜ್ಯ ಹಾಗೂ ಹೊರರಾಜ್ಯಗಳಿಂದ ಆಗಮಿಸಿದ್ದ ಶ್ರೀಮಠದ ಪ್ರತಿನಿಧಿಗಳನ್ನು ಆಶೀರ್ವದಿಸಿದ ಶ್ರೀಗಳು, ಸಮಾಜದಲ್ಲಿ ಸಂಸ್ಕೃತಿ, ಗ್ರಾಮೀಣ ಜೀವನ ಹಾಗೂ ಸಂತತಿ ವೃದ್ಧಿಯ ಕುರಿತು ಜಾಗೃತಿ ಮೂಡಿಸುವ ಜವಾಬ್ದಾರಿ ಗುರಿಕಾರರದ್ದಾಗಿದೆ ಎಂದರು. ಇದೇ ವೇಳೆ 11 ಮಂಡಲಗಳಿಂದ ಸಂಗ್ರಹಿಸಿದ ಕಾಣಿಕೆಯನ್ನು ಶ್ರೀಗಳಿಗೆ ಸಮರ್ಪಿಸಲಾಯಿತು.

ಸತ್ಯನಾರಾಯಣ ಮೊಗ್ರ ದಂಪತಿಗಳು ಗುರುಭಿಕ್ಷಾ ಸೇವೆ ನೆರವೇರಿಸಿದರು. ಗುರಿಕಾರರ ಕ್ಷೇಮಕ್ಕಾಗಿ 1008 ನವಗ್ರಹ ಶಾಂತಿ ಹವನ ವಿಶೇಷವಾಗಿ ನಡೆಯಿತು.ಹವ್ಯಕ ಮಹಾಮಂಡಲದ ಅಧ್ಯಕ್ಷ ಹರಿಪ್ರಸಾದ್ ಪೆರಿಯಾಪು, ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ,ಉಪಾಧ್ಯಕ್ಷರಾದ ಜಿ.ಜಿ ಹೆಗಡೆ, ಶಿವಶಂಕರ ಭಟ್ಟ ಭೋನಂತಾಯ, ಗಣಪತಿ ಸುಬ್ರಾಯ ಹೆಗಡೆ, ಶಾಂತರಾಮ ಹಿರೇಮನೆ, ಚಾತುರ್ಮಾಸ್ಯದ ಪ್ರಧಾನ ಸಂಯೋಜಕ ಚಂದನ್ ಶಾಸ್ತ್ರಿ, ದಿನಪ್ರಧಾನರಾಗಿ ಈಶ್ವರ ಕೇಶವ ಹೆಗಡೆ ಮುಂತಾದವರು ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !