ಹೊಸದಿಗಂತ ವರದಿ,ಪಾಂಡವಪುರ:
ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ತಂದೆ, ತಮ್ಮ ಹಾಗೂ ಕುಟುಂಬಸ್ಥರೇ ಮನೆ ಮಗನಿಗೆ ಮಾರಕಾಸದಿಂದ ಹಲ್ಲೆ ನಡೆಸಿ ಮನೆ ಆವರಣದಲ್ಲೇ ಹಗ್ಗದಲ್ಲಿ ಕೈಕಾಲು ಕಟ್ಟಿರುವ ಅಮಾನವೀಯ ಘಟನೆ ತಾಲೂಕಿನ ಎರೆಗೌಡನಹಳ್ಳಿಯಲ್ಲಿ ನಡೆದಿದೆ.
ಗ್ರಾಮದ ನಿವಾಸಿ, ಕೋಡಾಲ ಗ್ರಾಮದ ಅಳಿಮಯ್ಯ ಆಗಿರುವ ನಾಗೇಶ್‌ಗೆ ಸ್ವತಃ ಕುಟುಂಬಸ್ಥರೇ ಮನಬಂದಂತೆ ಹಲ್ಲೆ ನಡೆಸಿ ಕೈಕಾಲು ಕಟ್ಟಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆ.
ಗ್ರಾಮದ ನಿವಾಸಿ ಮಹದೇವೇಗೌಡ, ಕೊನೆಯ ಪುತ್ರ ನಂಜುಂಡೇಗೌಡ ಹಾಗೂ ಕುಟುಂಬಸ್ಥರು ಒಗ್ಗೂಡಿ ಮಹದೇವೇಗೌಡ ಅವರ ಮೊದಲನೇ ಪುತ್ರ ನಾಗೇಶ್‌ಗೆ ಆಸ್ತಿ ವಿಚಾರವಾಗಿ ಗುದ್ದಲಿ ಸೇರಿದಂತೆ ಮಾರಕಾಸದಿಂದ ರಕ್ತ ಸುರಿಯುವಂತೆ ಹಲ್ಲೆ ನಡೆಸಿ ನಂತರ ಮನೆ ಬಳಿಯೇ ಹಗ್ಗದಲ್ಲಿ ಕೈಕಾಲು ಕಟ್ಟಿದ್ದಾರೆ.
ಸುದ್ದಿ ತಿಳಿದ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ಹಗ್ಗದಿಂದ ಕಟ್ಟಿದ್ದ ನಾಗೇಶ್ ಅವರನ್ನು ಬಿಡಿಸಿ ತಕ್ಷಣ ತುರ್ತುವಾಹನ ಮೂಲಕ ಪಾಂಡವಪುರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಿದ್ದಾರೆ.
ಹಲ್ಲೆಗೊಳಗಾದ ನಾಗೇಶ್ ಪತ್ನಿ ಭಾರತಿ ಅವರು ಪಾಂಡವಪುರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.