ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರ್ಕಾರ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಅಣೆಕಟ್ಟೆಯ ಬೃಂದಾವನದ ಬಳಿ ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಅಮ್ಯೂಸ್‌ಮೆಂಟ್ ಪಾರ್ಕ್‌ಗೆ ತಮ್ಮ ವಿರೋಧವಿದ್ದು, ಸಂಸ್ಕೃತಿ, ಪರಂಪರೆಯ ಪ್ರತೀಕವಾದ ಗಂಗಾರತಿ ಮಾದರಿಯ ಕಾವೇರಿ ಆರತಿಗೆ ಬೆಂಬಲವಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.
ಮಂಡ್ಯ ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆಯೇ ಅಮ್ಯೂಸ್‌ಮೆಂಟ್ ಪಾರ್ಕ್‌ಗೆ ವಿರೋಧ ವ್ಯಕ್ತಪಡಿಸಿದ್ದು, ಇದಕ್ಕೆ ಪ್ರಮುಖ ಕಾರಣ ಮಂಡ್ಯ ಜಿಲ್ಲೆಯ ರೈತರು, ಸಾರ್ವಜನಿಕರು ಹಾಗೂ ಸ್ಥಳೀಯರು ವಿರೋಧ ವ್ಯಕ್ತಪಡಿಸುವಾಗ ಕಾಳಜಿಯುಳ್ಳ ಜನಪ್ರತಿನಿಧಿಯಾಗಿ ರಾಜವಂಶಸ್ಥನಾಗಿ ಜನರ ಭಾವನೆಗೆ ಸ್ಪಂದಿಸುವುದು ತನ್ನ ಕರ್ತವ್ಯ ಎಂದು ಸ್ಪಷ್ಟಪಡಿಸಿದರು.
ಕೆಆರ್‌ಎಸ್ ಡ್ಯಾಂಗೆ ನೂರು ವರ್ಷ ಕಳೆದಿದೆ. ಇದು ಸೂಕ್ಷ್ಮ ಪ್ರದೇಶವಾಗಿದ್ದು, ಪ್ರಕೃತಿದತ್ತವಾಗಿದೆ. ಡ್ಯಾಂನ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಾರ್ವಜನಿಕರು ತಮ್ಮ ಭಾವನೆ ವ್ಯಕ್ತಪಡಿಸಿದ್ದಾರೆ. ಆ ಭಾವನೆಗೆ ಬೆಲೆ ಕೊಡಬೇಕಾದ್ದು ತನ್ನ ಆದ್ಯ ಕರ್ತವ್ಯ ಎಂದರು. ಗಂಗಾರತಿ ಮಾದರಿಯಲ್ಲಿ ರಾಜ್ಯ ಸರ್ಕಾರ ಕಾವೇರಿ ಆರತಿ ಮಾಡಲು ಹೊರಟಿರುವುದು ಒಳ್ಳೆಯ ವಿಚಾರ. ನಮ್ಮ ಸಂಸ್ಕೃತಿ ಪರಂಪರೆ, ಹಿಂದೂ ಧರ್ಮವನ್ನು ಬಿಂಬಿಸುವ ಕಾರ್ಯಕ್ರಮವನ್ನು ಮಾಡಲು ಹೊರಟಾಗ ಬೆಂಬಲಿಸುವುದು ನಮ್ಮ ಕರ್ತವ್ಯ ಎಂದು ಅವರು ಹೇಳಿದರು.