ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿರುಪತಿ ದೇವಸ್ಥಾನದ ಲಡ್ಡು ಪ್ರಸಾದದಲ್ಲಿ ಬಳಸುವ ತುಪ್ಪದ ಗುಣಮಟ್ಟದ ಬಗ್ಗೆ ಭಕ್ತರಲ್ಲಿ ಆತಂಕ ಉಂಟಾಗಿದ್ದು, ಈ ನಡುವೆ ತಿರುಮಲ ತಿರುಪತಿ ದೇವಸ್ಥಾನ (TTD) ಸಿಹಿತಿಂಡಿಯ ಪಾವಿತ್ರ್ಯತೆಯನ್ನು ಕಾಪಾಡಲಾಗಿದೆ ಎಂದು ಸ್ಪಷ್ಟಪಡಿಸಿದೆ.
ತಿರುಮಲ ಬೆಟ್ಟದ ಮೇಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನವನ್ನು ನಿರ್ವಹಿಸುತ್ತಿರುವ ಟಿಟಿಡಿ, ಸೋಷಿಯಲ್ ಮೀಡಿಯಾ ಪೋಸ್ಟ್ ನಲ್ಲಿ ಶ್ರೀವಾರಿ ಲಡ್ಡುವಿನ ದೈವತ್ವ ಮತ್ತು ಪರಿಶುದ್ಧತೆ ಈಗ ಕಳಂಕರಹಿತವಾಗಿದೆ ಎಂದು ಹೇಳಿದೆ.
‘ಶ್ರೀವಾರಿ ಲಡ್ಡುವಿನ ದೈವತ್ವ ಮತ್ತು ಪರಿಶುದ್ಧತೆ ಈಗ ಕಳಂಕರಹಿತವಾಗಿದೆ. ಎಲ್ಲಾ ಭಕ್ತರಿಗೆ ತೃಪ್ತಿಯಾಗುವಂತೆ ಲಡ್ಡು ಪ್ರಸಾದದ ಪವಿತ್ರತೆಯನ್ನು ರಕ್ಷಿಸಲು ಟಿಟಿಡಿ ಬದ್ಧವಾಗಿದೆ’ ಎಂದು ದೇವಾಲಯದ ಮಂಡಳಿಯು ಪೋಸ್ಟ್‌ನಲ್ಲಿ ತಿಳಿಸಿದೆ.
ಎರಡು ದಿನಗಳ ಹಿಂದೆ ಆಂಧ್ರ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು, ತಿರುಪತಿ ಲಡ್ಡಿನ ಗುಣಮಟ್ಟಕ್ಕಾಗಿ ಪರೀಕ್ಷಿಸಲಾದ ಮಾದರಿಗಳಲ್ಲಿ ಕಳಪೆ ಗುಣಮಟ್ಟದ ತುಪ್ಪ ಮತ್ತು ಪ್ರಾಣಿಗಳ ಕೊಬ್ಬಿನ ಅಂಶ ಕಂಡುಬಂದಿದೆ ಎಂದು ಹೇಳಿಕೆ ನೀಡಿದ್ದು ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿತ್ತು.