ಬಳ್ಳಾರಿಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ

ಹೊಸದಿಗಂತ ವರದಿ, ಬಳ್ಳಾರಿ:

ವಿದ್ಯುತ್ ಸಮಸ್ಯೆ, ಬೀಕರ ಬರ, ಅನಿಯಮಿತ ವಿದ್ಯುತ್ ಲೊಡ್ ಶೆಡ್ಡಿಂಗ್, ಬಿಜೆಪಿ ಸರ್ಕಾರದ ಜನಪರ ಯೋಜನೆಗಳನ್ನು ರದ್ದು ಪಡಿಸಿದ ಕಾಂಗ್ರೆಸ್ ಸರ್ಕಾರದ ವಿರುದ್ಧ ನಗರದಲ್ಲಿ ಬಿಜೆಪಿ ರೈತ ಮೋರ್ಚಾ ಆಶ್ರಯದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ನಗರದ ನೂತನ ಜಿಲ್ಲಾಡಳಿತ ಭವನದ ಎದುರು ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ನಂತರ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ರವಾನಿಸಿದರು. ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಎಸ್.ಗುರುಲಿಂಗನಗೌಡ, ಜಿಲ್ಲಾಧ್ಯಕ್ಷ ಪ್ರಕಾಶ ಗೌಡ, ತಾಲೂಕು ಅಧ್ಯಕ್ಷ ಟಿ.ಸತ್ಯನಾರಾಯಣ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾಜಿ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಅವರು ಮಾತನಾಡಿ, ಸುಳ್ಳು ಗ್ಯಾರಂಟಿಗಳ ಮೂಲಕ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಇದು ಸಂಪೂರ್ಣ ರೈತ ವಿರೋಧಿ ಸರ್ಕಾರವಾಗಿದೆ. ನಮ್ಮ ಅವಧಿಯಲ್ಲಿ ಜಾರಿಗೊಳಿಸಿದ್ದ ಜನಪರ ಯೋಜನೆಗಳಾದ ಕಿಸಾನ್ ಸಮ್ಮಾನ್ ನಿಧಿ, ರೈತ ವಿದ್ಯಾನಿಧಿ, ಭೂ ಸಿರಿ ಯೋಜನೆ, ಶ್ರಮ ಶಕ್ತಿ ಯೋಜನೆ, ರೈತ ಸಂಪದ ಯೋಜನೆ, ಎಪಿಎಂಸಿ ಕಾಯ್ದೆ, ಕೃಷಿ ಭೂಮಿ ಮಾರಾಟ ಕಾನೂನು, ಪ್ರತಿ‌ಜಿಲ್ಲೆಗೊಂದು ಗೋ ಶಾಲೆ, ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್, ಸೇರಿದಂತೆ ವಿವಿಧ ಮಹತ್ವದ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ರದ್ದು ಪಡಿಸಿದೆ, ಇದು ಸಂಪೂರ್ಣ ದ್ವೇಷದ ರಾಜಕಾರಣವಾಗಿದ್ದು, ಬರುವ ದಿನಗಳಲ್ಲಿ ರಾಜ್ಯದ ಜನರೇ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.

ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್ ಅವರು ಮಾತನಾಡಿ, ಸಿ.ಎಂ.ಸಿದ್ದರಾಮಯ್ಯ ಅವರು, ಕೂಡಲೇ ಬರ ನಿರ್ವಹಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು, ರೈತರ ನೆರವಿಗೆ ಸರ್ಕಾರ ಮುಂದಾಗಬೇಕು, ರೈತರಿಗೆ ನಾನಾ ಭರವಸೆಗಳನ್ನು ನೀಡಿದ ಕಾಂಗ್ರೆಸ್, ಅಸ್ತಿತ್ವಕ್ಕೆ ಬಂದ ಬಳಿಕ ವಿವಿಧ ಸುಳ್ಳು ಭಾಗ್ಯಗಳ ಜೊತೆಗೆ ರೈತರಿಗೆ ಕತ್ತಲೆ‌ ಭಾಗ್ಯವನ್ನು ನೀಡಿದೆ. ಕೂಡಲೇ ಸರ್ಕಾರ ರೈತರ ನೆರವಿಗೆ ಮುಂದಾಗಬೇಕು, ನಿರ್ಲಕ್ಷ್ಯ ವಹಿಸಿದರೇ ಪ್ರತಿಭಟನೆಯ ಸ್ವರೂಪ ಬದಲಾಗಲಿದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮುರಹರಗೌಡ ಗೋನಾಳ್, ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಎಸ್.ಗುರುಲಿಂಗನಗೌಡ, ಜಿಲ್ಲಾಧ್ಯಕ್ಷ ಪ್ರಕಾಶಗೌಡ, ತಾಲೂಕು ಅಧ್ಯಕ್ಷ ಟಿ.ಸತ್ಯನಾರಾಯಣ, ರಾಬಕೋ ಒಕ್ಕೂಟದ ಮಾಜಿ ಅಧ್ಯಕ್ಷ ಎಚ್.ಹನುಮಂತಪ್ಪ, ಮುಖಂಡರಾದ ಕೆ.ರಾಮಲಿಂಗಪ್ಪ, ಎರ್ರಂಗಳಿ ತಿಮ್ಮಾರೆಡ್ಡಿ, ಐನಾಥ್ ರೆಡ್ಡಿ, ಎಚ್.ಓಬಳೇಶ್, ಡಾ.ಮಹಿಪಾಲ್, ಪಾಲಿಕೆ ಸದಸ್ಯರಾದ ಹನುಮಂತಪ್ಪ, ಗುಡಿಗಂಟೆ ಹನುಮಂತ, ಮೋತ್ಕರ್ ಶ್ರೀನಿವಾಸ್, ಸುರೇಖಾ ಮಲ್ಲನಗೌಡ ಸೇರಿದಂತೆ ಇತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!