Monday, March 4, 2024

ಮಂಡ್ಯದ ಹನುಮಾನ್ ಧ್ವಜ ತೆರವು ಖಂಡಿಸಿ ಚಿತ್ರದುರ್ಗದಲ್ಲಿ ಬಿಜೆಪಿಯಿಂದ ಪ್ರತಿಭಟನೆ

ಹೊಸದಿಗಂತ ವರದಿ,ಚಿತ್ರದುರ್ಗ:

ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ ಮಂಡ್ಯ ಜಿಲ್ಲೆಯ ಕೆರಗೋಡಿನಲ್ಲಿ ಹನುಮಾನ್ ಧ್ವಜ ಇಳಿಸಿ ಸಮಸ್ತ ಹಿಂದೂಗಳಿಗೆ ಅವಮಾನ ಮಾಡಿದೆ ಎಂದು ಆರೋಪಿಸಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಚಿತ್ರದುರ್ಗ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಚಾಲಕ ಎಸ್.ಲಿಂಗಮೂರ್ತಿ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ, ಪೊಲೀಸರ ಬಲದಿಂದ ಕಾಂಗ್ರೆಸ್ ಸರ್ಕಾರ ಕೆರಗೋಡಿನಲ್ಲಿ ಹನುಮ ಧ್ವಜವನ್ನು ಇಳಿಸಿ ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ. ಇದಕ್ಕೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೇರ ಹೊಣೆಗಾರರು. ಧರ್ಮವನ್ನು ಬಿಟ್ಟು ಯಾರೂ ಬದುಕಲು ಸಾಧ್ಯವಿಲ್ಲ. ರಾಮ, ಆಂಜನೇಯ ಇಲ್ಲದ ಊರುಗಳೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಸರ್ಕಾರದ ವರ್ತನೆ ಸರಿಯಲ್ಲ ಎಂದು ಕಿಡಿಕಾರಿದರು.
ದೇಶದ ಪ್ರಧಾನಿ ನರೇಂದ್ರ ಮೋದಿಯವರು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟಿಸಿ ಇಡೀ ಪ್ರಪಂಚವೇ ಭಾರತದತ್ತ ನೋಡುವಂತೆ ಮಾಡಿದ್ದಾರೆ. ಸನಾತನ ಧರ್ಮದ ಬಗ್ಗೆ ಪ್ರಪಂಚದೆಲ್ಲೆಡೆ ಮಾತನಾಡುವಂತಾಗಿದೆ. ಆದರೆ ಕಾಂಗ್ರೆಸ್ ಮಾತ್ರ ಹಿಂದೂ ಧರ್ಮವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಇಂತಹ ಘಟನೆ ಇನ್ನೆಲ್ಲಿಯೂ ನಡೆಯಬಾರದು. ಒಂದು ವೇಳೆ ನಡೆದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ ಮಾತನಾಡಿ, ಮಂಡ್ಯ ಜಿಲ್ಲೆ ಕೆರಗೋಡಿನಲ್ಲಿ ಹನುಮನ ಧ್ವಜ ಇಳಿಸಿ ಅಶಾಂತಿಯನ್ನುಂಟು ಮಾಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ತುರ್ತು ಪರಿಸ್ಥಿತಿ ನಿರ್ಮಾಣ ಮಾಡಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ಹಿಂದೂಗಳ ಮೇಲೆ ದೌರ್ಜನ್ಯವೆಸಗುತ್ತಿದೆ. ಕೆರಗೋಡಿನಲ್ಲಿ ಗ್ರಾಮ ಪಂಚಾಯಿತಿ ಅನುಮೋದನೆ ಪಡೆದು ಹನುಮ ಧ್ವಜವನ್ನು ನಿರ್ಮಿಸಲಾಗಿತ್ತು. ಪೊಲೀಸರ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿರುವ ಕಾಂಗ್ರೆಸ್ ಹನುಮ ಧ್ವಜವನ್ನು ಇಳಿಸಿರುವುದು ಖಂಡನೀಯ ಎಂದರು.
ಹಳೆಯ ಕೇಸನ್ನು ಕೆದಕಿ ಹಿಂದೂ ಕಾರ್ಯಕರ್ತರನ್ನು ಬಂಧಿಸುವ ಕೆಲಸ ಮಾಡಲಾಗುತ್ತಿದೆ. ಹುಬ್ಬಳ್ಳಿಯಲ್ಲಿ ಶ್ರೀಕಾಂತ್ ಪೂಜಾರಿಯನ್ನು ಬಂಧಿಸಲಾಗಿತ್ತು. ಈಗಿನ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರನ್ನು ಒಂಬತ್ತು ತಿಂಗಳಲ್ಲಿ ಮೂರು ಬಾರಿ ಬಂಧಿಸಲಾಗಿತ್ತು. ನಿಮ್ಮ ದೌರ್ಜನ್ಯಕ್ಕೆ ಹಿಂದೂ ಸಮಾಜ ಜಗ್ಗಲ್ಲ. ಪೊಲೀಸರೆ ಕೆರಗೋಡಿನಲ್ಲಿ ಹನುಮಾನ್ ಧ್ವಜವನ್ನು ಮತ್ತೆ ಪುನರ್ ಪ್ರತಿಷ್ಟಾಪಿಸಬೇಕು. ಇಲ್ಲವಾದರೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಯುವ ಮುಖಂಡ ಡಾ.ಸಿದ್ದಾರ್ಥ ಗುಂಡಾರ್ಪಿ, ಎನ್.ಆರ್.ಲಕ್ಷ್ಮಿಕಾಂತ್, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಜಿ.ಟಿ.ಸುರೇಶ್ ಸಿದ್ದಾಪುರ, ಸೂರನಹಳ್ಳಿ ವಿಜಯಣ್ಣ, ನಗರಾಧ್ಯಕ್ಷ ನವೀನ್ ಚಾಲುಕ್ಯ, ಗ್ರಾಮಾಂತರ ಅಧ್ಯಕ್ಷ ಕಲ್ಲೇಶಯ್ಯ, ನರೇಂದ್ರ ಹೊನ್ನಾಳ್, ನಾಗರಾಜ್ ಬೇದ್ರೆ, ರಾಮರೆಡ್ಡಿ, ಡಾ.ಮಂಜುನಾಥ್, ಶೈಲೇಶ್, ಪಾಲಯ್ಯ, ವೆಂಕಟೇಶ್ ಯಾದವ್, ಮಲ್ಲಿಕಾರ್ಜುನ್, ಶ್ಯಾಮಲಾ ಶಿವಪ್ರಕಾಶ್, ಶೈಲಜಾರೆಡ್ಡಿ, ಮಂಜುಳಮ್ಮ, ಕವನ, ಬಸಮ್ಮ, ದಗ್ಗೆ ಶಿವಪ್ರಕಾಶ್, ಕಾಂಚನ, ಶಂಭು, ತಿಪ್ಪೇಸ್ವಾಮಿ, ರೂಪ ಸುರೇಶ್, ತಿಪ್ಪೇಸ್ವಾಮಿ, ಸಂಪತ್ ಕುಮಾರ್ ಸೇರಿದಂತೆ ಇನ್ನು ಅನೇಕರು ಪಾಲ್ಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!