ಹೊಸದಿಗಂತ ವರದಿ,ಮಡಿಕೇರಿ:
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ವಿಶ್ವ ಸಂಸ್ಥೆಯಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವ ನೀಡಿದ ಅನುಚಿತ ಹೇಳಿಕೆಯನ್ನು ಖಂಡಿಸಿ ಹಾಗೂ ಕೆಪಿಸಿಸಿ ಅಧ್ಯಕ್ಷರ ಭಯೋತ್ಪಾದಕತೆಗೆ ಬೆಂಬಲ ನೀಡುವಂತಹ ಹೇಳಿಕೆ ವಿರೋಧಿಸಿ ಬಿಜೆಪಿಯಿಂದ ನಗರದ ಜನರಲ್ ಕೆ.ಎಸ್. ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.
ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ ನೇತೃತ್ವದಲ್ಲಿ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಸಿ.ಸುನಿಲ್ ಸುಬ್ರಮಣಿ , ಮಡಿಕೇರಿ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಅವರ ಉಪಸ್ಥಿತಿಯಲ್ಲಿ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಪಾಕಿಸ್ತಾನದ ವಿದೇಶಾಂಗ ಸಚಿವ ಮತ್ತು ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ ಮಾತನಾಡಿ, ಇಡೀ ವಿಶ್ವವೇ ಮೆಚ್ಚುವಂತಹ ನಾಯಕತ್ವವನ್ನು ಭಾರತಕ್ಕೆ ನೀಡಿದ ನರೇಂದ್ರ ಮೋದಿ ಅವರ ಬಗ್ಗೆ ಪಾಕಿಸ್ತಾನ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ನೀಡಿದ ಅವಹೇಳನಕಾರಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದರು.
ಭಾರತದ ವಿರುದ್ಧ ಮೂರು ಬಾರಿ ಯುದ್ಧ ಮಾಡಿ ಹೀನಾಯವಾಗಿ ಸೋತಿರುವ ಪಾಕಿಸ್ತಾನಕ್ಕೆ, ನೇರ ಯುದ್ಧದ ಮೂಲಕ ಭಾರತವನ್ನು ಜಯಿಸಲು ಸಾಧ್ಯವಿಲ್ಲ ಎನ್ನುವುದು ತಿಳಿದಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಭಾರತದಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಾ ಪರೋಕ್ಷ ಯುದ್ಧವನ್ನು ಸಾರುತ್ತಿದೆ. ಮುಂಬರುವ ದಿನಗಳಲ್ಲಿ ಪ್ರಧಾನಿ ಮೋದಿ ಅವರನ್ನು ಅವಮಾನಿಸಿದರೆ ಪಾಕಿಸ್ತಾನ ತಕ್ಕ ಉತ್ತರವನ್ನು ಪಡೆಯಲಿದೆಯೆಂದು ಸ್ಪಷ್ಟಪಡಿಸಿದರು.
ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಬಿ. ಭಾರತೀಶ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಿಂದ ಭಾರತಕ್ಕೆ ವಿಶ್ವ ಸ್ತರದಲ್ಲಿ ವರ್ಚಸ್ಸು ಹೆಚ್ಚುತ್ತಿರುವುದನ್ನು ಸಹಿಸಲಾಗದೆ ಅಲ್ಲಿನ ವಿದೇಶಾಂಗ ಸಚಿವ ಇಂತಹ ಹೇಳಿಕೆ ನೀಡಿದ್ದಾನೆ. ಇಂದು ಪಾಕಿಸ್ತಾನದ ವರ್ಚಸ್ಸು ಅಂತರಾಷ್ಟ್ರೀಯ ಮಟ್ಟದಲ್ಲಿ ಕುಸಿಯುತ್ತಿದ್ದು, ಇದನ್ನು ಮರೆ ಮಾಚಲು ಮೋದಿಯವರನ್ನು ಗುರಿಯಾಗಿಸಿ ಆರೋಪಗಳನ್ನು ಮಾಡಿದ್ದು, ಇದನ್ನು ಸಹಿಸಲಾಗದು ಎಂದು ಹೇಳಿದರು.
ಮಂಗಳೂರು ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಪರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡುವ ಮೂಲಕ ಅಲ್ಪಸಂಖ್ಯಾತ ಮತ ಬ್ಯಾಂಕ್ ರಕ್ಷಿಸಿಕೊಳ್ಳುವ ನೀತಿಗೆಟ್ಟ ರಾಜಕಾರಣ ಮಾಡಿರುವುದಾಗಿ ತೀಕ್ಷ್ಣವಾಗಿ ನುಡಿದರು.
ಪ್ರತಿಭಟನೆಯಲ್ಲಿ ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಮಡಿಕೇರಿ ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ್ ಸುಬ್ರಮಣ , ನಗರಸಭಾ ಸದಸ್ಯರಾದ ಅರುಣ್ ಶೆಟ್ಟಿ, ಎಸ್.ಸಿ. ಸತೀಶ್, ಕೆ.ಎಸ್.ರಮೇಶ್, ಶ್ವೇತ ಹಾಗೂ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬಿ.ಕೆ. ಅರುಣ್ ಕುಮಾರ್, ಜಿಲ್ಲಾ ವಕ್ತಾರ ಮಹೇಶ್ ಜೈನಿ, ನಗರ ಉಪಾಧ್ಯಕ್ಷ ಬಿ.ಕೆ.ಜಗದೀಶ್, ನಗರ ಯುವ ಮೋರ್ಚಾ ಅಧ್ಯಕ್ಷ ನವೀನ್ ಪೂಜಾರಿ, ಬಿಜೆಪಿ ಪ್ರಮುಖರಾದ ಸಜಿಲ್ ಕೃಷ್ಣ, ಡಿಶು, ಎನ್.ಎಸ್. ಸತ್ಯ, ಉನ್ನಿ ಕೃಷ್ಣ ಮೊದಲಾದವರಿದ್ದರು.