Saturday, December 9, 2023

Latest Posts

ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ರೈತ ಸಂಘದಿಂದ ಪ್ರತಿಭಟನೆ

ಹೊಸದಿಗಂತ ವರದಿ,ಚಿತ್ರದುರ್ಗ :

ರೈತರ ನೀರಾವರಿ ಪಂಪ್‌ಸೆಟ್‌ಗಳಿಗೆ ನಿರಂತರವಾಗಿ ಏಳು ಗಂಟೆಗಳ ಕಾಲ ಗುಣಮಟ್ಟದ ವಿದ್ಯುತ್ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು. ನಗರದ ಪ್ರವಾಸಿ ಮಂದಿರದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು. ಕೆಲವು ರೈತರು ತಲೆಯ ಮೇಲೆ ರೊಟ್ಟಿ ಬುತ್ತಿ ಹೊತ್ತುಕೊಂಡು ನಮಗೆ ಏಳು ಗಂಟೆಗಳ ಕರೆಂಟ್ ಕೊಡಿ ಸರ್ಕಾರಕ್ಕೆ ರೊಟ್ಟಿ ಬುತ್ತಿ ಕೊಡುತ್ತೇವೆಂದು ಚೇಡಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ನೀರಾವರಿ ಪಂಪ್‌ಸೆಟ್‌ಗಳಿಗೆ ದಿನಕ್ಕೆ ಏಳು ಗಂಟೆಗಳ ಕಾಲ ನಿರಂತರ ವಿದ್ಯುತ್ ನೀಡುವುದಾಗಿ ಭರವಸೆ ಕೊಟ್ಟಿದ್ದ ಸರ್ಕಾರ ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ವಿದ್ಯುತ್‌ನ್ನು ನಿಲುಗಡೆಗೊಳಿಸುತ್ತಿದೆ. ಇದರಿಂದ ಕೃಷಿಗಾಗಿ ಸಾಲ ಮಾಡಿ ಬಂಡವಾಳ ಹಾಕಿರುವ ರೈತ ವಿಷ ಕುಡಿಯುವ ಹಂತಕ್ಕೆ ತಲುಪಿದ್ದಾನೆ. ಹಾಸನ ಜಿಲ್ಲೆಯಲ್ಲಿ ದಿನಕ್ಕೆ ಒಂಬತ್ತು ಗಂಟೆಗಳ ಕಾಲ ರೈತರಿಗೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಅಲ್ಲಿ ಹೇಗೆ ಸಾಧ್ಯ ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದರು.

ವಿಧಾನಸಭೆ ಚುನಾವಣಾ ಪೂರ್ವದಲ್ಲಿಯೇ ರಾಜ್ಯದ ಜನತೆಗೆ ಕಾಂಗ್ರೆಸ್ ಪಕ್ಷ ಘೋಷಿಸಿದ ಐದು ಗ್ಯಾರೆಂಟಿಗಳಿಗೆ ಹಣ ಒದಗಿಸಲು ಆಗುತ್ತಿಲ್ಲ. ರಾಜ್ಯದ ಖಜಾನೆ ದಿವಾಳಿಯಾಗಿದೆ. ರೈತರಿಗೆ ನೀಡಿರುವ ಸಬ್ಸಿಡಿ ಚೆಕ್‌ಗಳು ವಾಪಸ್ ಹೋಗುತ್ತಿವೆ. ಸಂಜೆ ಆರರಿಂದ ಹತ್ತು ಗಂಟೆಯವರೆಗೆ ವಿದ್ಯುತ್ ತೆಗೆಯುತ್ತಿದ್ದಾರೆ. ಬೆಳೆಯನ್ನು ರಕ್ಷಿಸಿಕೊಳ್ಳಲು ಸಾವಿರಾರು ಕುಟುಂಬಗಳು ಹೊಲಗಳಲ್ಲಿಯೇ ಮನೆಗಳನ್ನು ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ರೈತರಿಗೆ ಅಂತಹ ಪಾಡೇನು? ಎನ್ನುವ ಜ್ಞಾನವೂ ಸರ್ಕಾರಕ್ಕಿಲ್ಲದಂತಾಗಿರುವುದು ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಕ್ರಿಕೆಟ್ ಮೇಲಿರುವ ವ್ಯಾಮೋಹ ರೈತರ ಮೇಲೆ ಇಲ್ಲದಂತಾಗಿದೆ. ಕರೆಂಟ್ ತೆಗೆಯುತ್ತಿರುವುದನ್ನು ವಿರೋಧಿಸಿ ರಾಜ್ಯಾದ್ಯಂತ ರೈತರು ಚಳುವಳಿಯಲ್ಲಿ ತೊಡಗಿರುವುದರಿಂದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಭಯ ಹುಟ್ಟಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ರೈತರು ಕಾಂಗ್ರೆಸ್ ವಿರುದ್ದ ಮತ ಚಲಾಯಿಸಲಿದ್ದಾರೆಂಬುದು ಅರಿವಾಗಿ ಬೆಸ್ಕಾಂ ಎಂ.ಡಿ.ಯವರಿಗೆ ರೈತರ ಹಾಗೂ ಜಿಲ್ಲಾಧಿಕಾರಿ ಜೊತೆ ಸಭೆ ನಡೆಸುವಂತೆ ಸೂಚಿಸಿದ್ದಾರೆ. ರೈತರು ತಮ್ಮ ಬದುಕಿಗಾಗಿ ಹೋರಾಟ ಚುರುಕುಗೊಳಿಸಬೇಕೆಂದು ಮನವಿ ಮಾಡಿದರು.

ರೈತ ಮುಖಂಡರುಗಳಾದ ಕೆ.ಪಿ.ಭೂತಯ್ಯ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಬಿ.ಓ.ಶಿವಕುಮಾರ್, ಎಂ.ಲಕ್ಷ್ಮಿಕಾಂತ್, ಓ.ಪಿ.ಟಿ.ಸ್ವಾಮಿ, ಸಿ.ನಾಗರಾಜು ಮುದ್ದಾಪುರ, ಕೃಷ್ಣಪ್ಪ, ರವಿ ಕೋಗುಂಡೆ, ಕೆ.ಸಿ.ಹೊರಕೇರಪ್ಪ, ಧನಂಜಯ ಹಂಪಯ್ಯನಮಾಳಿಗೆ, ಕಲ್ಲೇನಹಳ್ಳಿ ಕುಮಾರಸ್ವಾಮಿ, ಎಲ್.ಮಲ್ಲಿಕಾರ್ಜುನ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!