ಹೊಸ ದಿಗಂತ ವರದಿ,ಕುಶಾಲನಗರ:
ಚಿಕ್ಕ ಅಳುವಾರದಲ್ಲಿರುವ ಕೊಡಗು ವಿಶ್ವವಿದ್ಯಾಲಯದ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದ ತಾತ್ಕಾಲಿಕ ಬೋಧಕೇತರ ಸಿಬ್ಬಂದಿಗಳ ಸೇವೆಯನ್ನು ಮುಂದುವರೆಸುವಂತೆ ಒತ್ತಾಯಿಸಿ ಕೇಂದ್ರದ ಹೊರ ಆವರಣದಲ್ಲಿ 24 ಬೋಧಕೇತರ ಸಿಬ್ಬಂದಿಗಳು ಪ್ರತಿಭಟನೆ ನಡೆಸಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಅಧೀನದಲ್ಲಿದ್ದಾಗಿನಿಂದಲೂ, ಸ್ನಾತಕೋತ್ತರ ಕೇಂದ್ರ ಆರಂಭವಾದಾಗಿನಿಂದಲೂ ಸೇವೆಯಲ್ಲಿದ್ದ 24 ಮಂದಿ ಸಿಬ್ಬಂದಿಗಳನ್ನು ಸೇವೆಯಿಂದ ಕೈಬಿಡಲಾಗಿದೆ. ಇದರಿಂದಾಗಿ ನಮ್ಮ ಜೀವನ ಅತಂತ್ರವಾಗಿದೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.
ನಲವತ್ತನಾಲ್ಕು ಮಂದಿ ಬೋಧಕೇತರ ಸಿಬ್ಬಂದಿಗಳ ಪೈಕಿ 18 ಮಂದಿಯನ್ನು ಮಾತ್ರ ಸೇವೆಯಲ್ಲಿ ಮುಂದುವರೆಸಿದ್ದು ಕಳೆದ 8-10 ವರ್ಷಗಳಿಂದ ಕೇಂದ್ರದ ಅಭಿವೃದ್ಧಿಗೆ ಶ್ರಮಿಸಿದ, ಎಲ್ಲಾ ಅರ್ಹತೆ ಹೊಂದಿರುವ ಸಿಬ್ಬಂದಿಗಳನ್ನು ಕೈಬಿಡಲಾಗಿದೆ. ಅತ್ತ ಮಂಗಳೂರು ವಿಶ್ವವಿದ್ಯಾನಿಲಯ, ಇತ್ತ ಕೊಡಗು ವಿಶ್ವವಿದ್ಯಾಲಯ ನಮ್ಮನ್ನು ನಿರ್ಲಕ್ಷಿಸಿದೆ. ಸೇವಾ ಅನುಭವ, ಮಾನದಂಡಗಳನ್ನು ಪರಿಗಣಿಸದೆ ಇತ್ತೀಚೆಗೆ ನೇಮಕಗೊಂಡ ಸಿಬ್ಬಂದಿಗಳನ್ನು ಸೇವೆಯಲ್ಲಿ ಮುಂದುವರೆಸಲಾಗಿದೆ ಎಂದು ಕೇಂದ್ರದ ವಿವಿಧ ವಿಭಾಗ, ಕಚೇರಿಯಲ್ಲಿ ಸೇವೆಯಲ್ಲಿದ್ದ ಪ್ರತಿಭಟನಾನಿರತರಾದ ಸವಿತಾ ರಾಣಿ, ಕೆ.ಜೆ.ಹರೀಶ್, ಎ.ಆರ್.ಗಣೇಶ್, ಯೋಗೇಶ್ ಆರೋಪಿಸಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಸವಿತಾರಾಣಿ, ಸ್ನಾತಕೋತ್ತರ ಕೇಂದ್ರದ ಕೆಲಸವನ್ನು ನಂಬಿ ಜೀವನ ಕಟ್ಟಿಕೊಂಡ ಹಲವು ಕುಟುಂಬಗಳು ಅತಂತ್ರ ಸ್ಥಿತಿಯಲ್ಲಿವೆ. 18 ಮಂದಿಯನ್ನು ಮುಂದುವರೆಸಿದಂತೆ ನಮ್ಮನ್ನು ಕೂಡಾ ಸೇವೆಯಲ್ಲಿ ಮುಂದುವರೆಸಬೇಕಿದೆ. ಕೇಂದ್ರದ ಅಭಿವೃದ್ದಿಗೆ ಶ್ರಮಿಸಿದ ಸ್ಥಳೀಯರು ತಮ್ಮ ಕೆಲಸ ಉಳಿಸಿಕೊಳ್ಳಲು ಹೋರಾಟದ ಹಾದಿ ಹಿಡಿಯುವ ಪರಿಸ್ಥಿತಿ ಎದುರಾಗಿದೆ. ಆದಾಗ್ಯೂ ಬೆದರಿಕೆ ತಂತ್ರಗಳ ಮೂಲಕ ನಮ್ಮನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಸಹಾಯಕ ಗ್ರಂಥಾಲಯ ಸಿಬ್ಬಂದಿಯಾಗಿದ್ದ ಹರೀಶ್ ಮಾತನಾಡಿ, ಬೇರೆ ವಿಶ್ವವಿದ್ಯಾಲಯಗಳಲ್ಲಿ ಇಲ್ಲದ ಸಮಸ್ಯೆ ಕೊಡಗು ವಿಶ್ವವಿದ್ಯಾಲಯದಲ್ಲಿ ತಲೆದೋರಿದೆ. ಉಳಿದ 18 ಮಂದಿಯನ್ನು ಯಾವ ಆಧಾರದಲ್ಲಿ ಸೇವೆಯಲ್ಲಿ ಮುಂದುವರೆಸಿದ್ದಾರೆಂದು ತಿಳಿಸಬೇಕಿದೆ. ಜೇಷ್ಠತೆ ಆಧಾರ, ಅನುಭವ ಹಾಗೂ ವಿದ್ಯಾಭ್ಯಾಸದಲ್ಲಿ ಮುಂದಿರುವವರನ್ನು ಕಡೆಗಣಿಸಿ ಇತ್ತೀಚೆಗೆ ಕೆಲಸಕ್ಕೆ ಸೇರಿದ, ಕನಿಷ್ಠ ವಿದ್ಯಾರ್ಹತೆ ಹೊಂದಿದವರನ್ನು ಸೇವೆಯಲ್ಲಿ ಮುಂದುವರೆಸಿರುವುದು ಎಷ್ಟು ಸರಿ. ಕೆಲಸವಿಲ್ಲದೆ ಅವರಿವರಲ್ಲಿ ಸಾಲ ಮಾಡಿ ಜೀವನ ದೂಡುವ ಪರಿಸ್ಥಿತಿ ಉಂಟಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕೊಡಗು ವಿಶ್ವವಿದ್ಯಾಲಯದ ಕುಲಪತಿ ಅಶೋಕ್ ಆಲೂರು ಅವರು, ಪ್ರತಿಭಟನಾಕಾರರಿಗೆ ವಾಸ್ತವ ಪರಿಸ್ಥಿತಿ ಮನದಟ್ಟು ಮಾಡಲು ಪ್ರಯತ್ನಿಸಿದರು. ಈ ಬಗ್ಗೆ ಮಂಗಳೂರು ವಿಶ್ವವಿದ್ಯಾನಿಲಯವನ್ನು ಸಂಪರ್ಕಿಸುವಂತೆಯೂ ತಿಳಿಸಿದರು.
ಕೊಡಗು ವಿಶ್ವವಿದ್ಯಾಲಯ ಘೋಷಣೆಯಾಗಿದೆ ಹೊರತು ಯಾವುದೇ ರೀತಿಯ ನೇಮಕಾತಿ ಪ್ರಕ್ರಿಯೆ ಮಾಡಿಕೊಳ್ಳುವ ಅಧಿಕಾರ ಹೊಂದಿಲ್ಲ. ಈಗಿರುವ ಸಮಸ್ಯೆಗಳಿಗೆ ಮಾತೃ ವಿಶ್ವವಿದ್ಯಾಲಯ ಅಥವಾ ಸರಕಾರ ಸ್ಪಂದಿಸಬೇಕಿದೆ. ಕೆಲವು ಸಿಬ್ಬಂದಿಗಳನ್ನು ಸೇವೆಯನ್ನು ತೆಗೆದಿರುವುದಕ್ಕೂ ಕೊಡಗು ವಿಶ್ವವಿದ್ಯಾಲಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರತಿಭಟನೆಯಲ್ಲಿ ಸಿಬ್ಬಂದಿಗಳಾದ ಚಂದ್ರಿಕಾ, ರಾಧಿಕಾ, ಚೈತ್ರಾ ,ಗಣೇಶ್ ಮತ್ತಿತರರು ಇದ್ದರು.