ಹೊಸದಿಗಂತ ವರದಿ ಮಂಡ್ಯ :
ಕರ್ನಾಟಕದ ನದಿ ನೀರಿನ ವಿವಾದಕ್ಕೆ ಶಾಶ್ವತ ಪರಿಹಾರಕ್ಕೆ ವೈಜ್ಞಾನಿಕ ರಾಷ್ಟ್ರೀಯ ಜಲನೀತಿ ಹಾಗೂ ಕಾವೇರಿ ಸಂಕಷ್ಟ ವೈಜ್ಞಾನಿಕ ಸೂತ್ರ ರೂಪಿಸಬೇಕು ಎಂದು ಒತ್ತಾಯಿಸಿ ಕಾವೇರಿ ಹಿತರಕ್ಷಣಾ ಸಮನ್ವಯ ಸಮಿತಿ ಕಾರ‌್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕಿನಲ್ಲಿ ಜಮಾಯಿಸಿದ ಕಾರ‌್ಯಕರ್ತರು, ನಗರದ ಜೆ.ಸಿ. ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲ ಕಾಲ ರಸ್ತೆ ಸಂಚಾರಕ್ಕೆ ಅಡ್ಡಿಪಡಿಸಿದರು. ಬಳಿಕ ಬೆಂಗಳೂರು-ಮೈಸೂರು ಹೆದ್ದಾರಿ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಡಿಸಿ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಬ್ರಿಟೀಷರ ಕಾಲದಿಂದಲೂ ಕಾವೇರಿ ಸಮಸ್ಯೆ ಜೀವಂತವಾಗಿದೆ. ಕಾವೇರಿ ನ್ಯಾಯ ಮಂಡಳಿಯ ಹೈತೀರ್ಪು ಬಂದಿದ್ದು ಆದೇಶದ ಅನುಗುಣವಾಗಿ ಕಾವೇರಿ ನದಿ ನೀರು ನಿರ್ವಹಣಾ ಸಮಿತಿ ಮತ್ತು ಪ್ರಾಧಿಕಾರಗಳನ್ನು ರಚಿಸಲಾಯಿತು. ಆದರೆ ಸಂಕಷ್ಟ ಸಮಯದಲ್ಲಿ ಇವುಗಳು ನ್ಯಾಯೋಚಿತ ಆದೇಶಗಳನ್ನು ನೀಡದೆ ಒಂದು ರಾಜ್ಯದ ಪರವಾಗಿ ನಿರ್ಧಾರ ಕೈಗೊಳ್ಳುತ್ತಿರುವುದು ಖಂಡನೀಯ ಎಂದು ಕಿಡಿಕಾರಿದರು.
ಇಂತಹ ಅವೈಜ್ಞಾನಿಕ ಆದೇಶಗಳಿಂದಾಗಿ ರಾಜ್ಯದಲ್ಲಿ ರೈತರ ಬೆಳೆಗಳಿಗೆ ನೀರಿಲ್ಲದೆ ನಾಶವಾಗಿದ್ದು, ಕಾವೇರಿ ನೀರನ್ನು ಅವಲಂಭಿತ 8 ಜಿಲ್ಲೆಗಳು, ಮಹಾನಗರ ಪಟ್ಟಣಗಳ ಜನ-ಜಾನುವಾರುಗಳಿಗೆ ಕುಡಿಯುವ ನೀರಿಲ್ಲದೆ ಹಾಹಾಕಾರ ಎದುರಾಗಿದೆ. ಈ ಸಂಕಷ್ಟ ದಿನದಲ್ಲಿ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರು ಸಂಗ್ರಹ ಕಡಿಮೆ ಇದ್ದರೂ ನ್ಯಾಯಾಲಯ ಮತ್ತು ಪ್ರಾಧಿಕಾರ ಮೊದಲು 10 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಆದೇಶ ನೀಡಿದ್ದು, ರಾಜ್ಯ ಸರ್ಕಾರ ಅದನ್ನು ಪಾಲನೆ ಮಾಡಿ ನೀರು ಹರಿಸಿದೆ. ಆದರೂ ಮತ್ತೆ ಮತ್ತೆ 5 ಸಾವಿರ, 3 ಸಾವಿರ, 2600 ಕ್ಯೂಸೆಕ್ ನೀರು ಹರಿಸುವಂತೆ ಪದೇ ಪದೇ ಅವೈಜ್ಞಾನಿಕ ತೀರ್ಪು ನೀಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.