ರಾಜ್ಯದ ಅಭಿವೃದ್ಧಿ ಕಾಮಗಾರಿಗೆ ಹಣ ಮಂಜೂರು ಮಾಡದಿದ್ರೆ ಪ್ರತಿಭಟನೆ ಗ್ಯಾರೆಂಟಿ: ಬಿಎಸ್‌ವೈ

ಹೊಸದಿಗಂತ ವರದಿ ಬೆಂಗಳೂರು:

ರಾಜ್ಯದ ಕಾಂಗ್ರೆಸ್ ಸರಕಾರವು ಸೇಡಿನ ರಾಜಕಾರಣ ಮಾಡುತ್ತಿದ್ದು, ಇದು ಖಂಡನೀಯ. ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಮಂಜೂರಾಗಿ ಅರ್ಧಂಬರ್ಧ ಕಾಮಗಾರಿ ಆಗಿರುವುದನ್ನು ನಿಲ್ಲಿಸಿ ಗೊಂದಲದ ವಾತಾವರಣ ನಿರ್ಮಾಣ ಮಾಡಿದ್ದಾರೆ. ಈ ಭಾಗದ ಅಭಿವೃದ್ಧಿಗೆ ಸರಕಾರ ಕೊಡಲಿ ಪೆಟ್ಟು ನೀಡಿದೆ ಎಂದು ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆಕ್ಷೇಪಿಸಿದರು.

ಆರ್.ಆರ್.ನಗರದ ಪಿ.ಇ.ಎಸ್ ಕಾಲೇಜು ಹತ್ತಿರ ಇರುವ ಕೆರೆಕೋಡಿ ಜಂಕ್ಷನ್‍ನಿಂದ ಬರಗಾಲ ಪರಿಸ್ಥಿತಿ ಅಧ್ಯಯನ ಕೈಗೊಂಡ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಸರಕಾರದ ಧೋರಣೆಯನ್ನು ಖಂಡಿಸಿ ಈ ತಿಂಗಳ ಕೊನೆಯಲ್ಲಿ 3 ದಿನ ವಿಧಾನಸೌಧದ ಮುಂದೆ ಸತ್ಯಾಗ್ರಹ ಮಾಡಲಿದ್ದೇವೆ. ಆ ಮೂಲಕ ಸರಕಾರಕ್ಕೆ ಎಚ್ಚರಿಕೆ ನೀಡುವುದಾಗಿ ತಿಳಿಸಿದರು.

ಕೇವಲ ಈ ಕ್ಷೇತ್ರವಲ್ಲ; ಎಲ್ಲ ಕಡೆ ಗುತ್ತಿಗೆದಾರರು ಕೆಲಸ ಮಾಡಲು ಸಿದ್ಧರಿಲ್ಲ. ಹಣ ಬಿಡುಗಡೆ ಮಾಡುತ್ತಿಲ್ಲ. ಹಳೆ ಕೆಲಸಕ್ಕೂ 7.5 ರಿಂದ ಶೇ 8 ಕಮಿಷನ್ ಕೇಳುತ್ತಿದ್ದಾರೆ. ಹೀಗಾಗಿ ಯಾವ ಗುತ್ತಿಗೆದಾರರೂ ಕೆಲಸ ಮಾಡಲು ಮುಂದೆ ಬರುತ್ತಿಲ್ಲ ಎಂದು ಆರೋಪಿಸಿದರು. ಈ ಸರಕಾರದ ಆಡಳಿತ ವೈಖರಿಯನ್ನು ಖಂಡಿಸುತ್ತೇನೆ. ಅದಕ್ಕಾಗಿ 3 ದಿನಗಳ ಕಾಲ ವಿಧಾನಸೌಧದ ಮುಂದೆ ಅಥವಾ ಫ್ರೀಡಂ ಪಾರ್ಕಿನಲ್ಲಿ ಸಾವಿರಾರು ಜನರು ಸೇರಿ ಪ್ರತಿಭಟನೆ ಮಾಡಲಿದ್ದೇವೆ ಎಂದು ಎಚ್ಚರಿಕೆ ನೀಡಿದರು. ಈ ಸಂಬಂಧ ದಿನಾಂಕವನ್ನು ನಾಳೆ ನಿಶ್ಚಯಿಸುವುದಾಗಿ ಪ್ರಕಟಿಸಿದರು.

ನಗರದ ಕೆಲವು ರಸ್ತೆಗಳನ್ನು ನೋಡಿದರೆ ನಾವು ಹಳ್ಳಿಯಲ್ಲಿದ್ದೇವೋ ನಗರದಲ್ಲಿದ್ದೇವೋ ಗೊತ್ತಾಗದಂತಾಗಿದೆ. ಸೇಡಿನ ರಾಜಕಾರಣದಿಂದ ಹಣ ಬಿಡುಗಡೆ ಮಾಡುತ್ತಿಲ್ಲ. ವೈಯಕ್ತಿಕ ದ್ವೇಷ ಮಾಡದೆ ಅಭಿವೃದ್ಧಿ ಕಾರ್ಯದ ಕಡೆ ಗಮನಿಸಲು ಒತ್ತಾಯಿಸುವುದಾಗಿ ತಿಳಿಸಿದರು. ಇದನ್ನು ಸರಕಾರದ ಗಮನಕ್ಕೂ ತರಲಿದ್ದೇನೆ. ಹೋರಾಟ ಮಾಡಿ ಕೆಲಸ ಮಾಡಿಸಿಕೊಡಲು ಗರಿಷ್ಠ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಈ ಕ್ಷೇತ್ರ ಮಾತ್ರವಲ್ಲದೆ ರಾಜ್ಯದ ಎಲ್ಲ ಕಡೆ ಅಭಿವೃದ್ಧಿ ಕಾರ್ಯ ಸ್ಥಗಿತವಾದುದರ ವಿರುದ್ಧ ಪ್ರತಿಭಟನೆ ನಡೆಯಲಿದೆ. ಪ್ರತಿಭಟನೆಯ ರೂಪುರೇಷೆಗಳನ್ನು ಚರ್ಚಿಸಿ ನಿರ್ಧರಿಸಲಿದ್ದೇವೆ ಎಂದು ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರವಾಗಿ ತಿಳಿಸಿದರು. ಬೆಳಗಾವಿ ಅಧಿವೇಶನದಲ್ಲಿ ಈ ಕುರಿತು ಗಮನ ಸೆಳೆಯಲು ನಮ್ಮೆಲ್ಲ ಶಾಸಕರಿಗೆ ಹೇಳಲಿದ್ದೇನೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು. ದೀಪಾವಳಿ ನಂತರ ಬಿಜೆಪಿಯ ಒಂದಷ್ಟು ಜನರು ಕಾಂಗ್ರೆಸ್ ಸೇರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಯಾರು ಎಲ್ಲಿ ಬೇಕಾದರೂ ಹೋಗಲಿ; ಅದರ ಬಗ್ಗೆ ನಾನು ಚಿಂತೆ ಮಾಡುತ್ತಿಲ್ಲ. ವಿರೋಧ ಪಕ್ಷವಾಗಿ ಕೆಲಸ ಮಾಡುವ ಬಗ್ಗೆ ಯೋಚಿಸುತ್ತೇನೆ ಎಂದು ತಿಳಿಸಿದರು.

ಅಕ್ರಮ ಕಾಮಗಾರಿ ಆಗಿದ್ದರೆ ತನಿಖೆ ಮಾಡಿಸಿ ಕ್ರಮ ತೆಗೆದುಕೊಳ್ಳಬೇಕು. ಎಲ್ಲ ಕೆಲಸಗಳನ್ನು ತಡೆಹಿಡಿಯುವುದು ಸರಿಯಲ್ಲ. ಇದು ಸೇಡಿನ ರಾಜಕಾರಣ; ಬೇರೇನೂ ಅಲ್ಲ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಉತ್ತರ ಕೊಟ್ಟರು.
ಆರ್.ಆರ್. ನಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಎನ್. ಮುನಿರತ್ನ ಅವರು ಮಾತನಾಡಿ, ನಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಸುಮಾರು 126 ಕೋಟಿ ರೂ. ಅನುದಾನವನ್ನು ಹಿಂದಿನ ಸರಕಾರ ಮಂಜೂರು ಮಾಡಿತ್ತು. ಸರಕಾರದ ಆದೇಶವೂ ಆಗಿತ್ತು. ಆ ಕಾಮಗಾರಿಗಳನ್ನು ರದ್ದುಪಡಿಸಿ, ಬೇರೆ ವಿಧಾನಸಭಾ ಕ್ಷೇತ್ರಗಳಿಗೆ 126 ಕೋಟಿ ಅನುದಾನವನ್ನು ವರ್ಗಾವಣೆ ಮಾಡಿದ್ದಾರೆ ಎಂದು ಟೀಕಿಸಿದರು. ಇದಕ್ಕೆ ಸಂಬಂಧಿಸಿ ನಾನು ಉಪವಾಸ ಸತ್ಯಾಗ್ರಹ ಮಾಡಿದ್ದೇನೆ ಎಂದು ಗಮನ ಸೆಳೆದರು.

ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಬೆಂಗಳೂರು ಕೇಂದ್ರ ಸಂಸದ ಪಿ.ಸಿ.ಮೋಹನ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಜಿ. ಮಂಜುನಾಥ್, ಮುಖಂಡರಾದ ಸಪ್ತಗಿರಿ ಗೌಡ, ಭಾಸ್ಕರ್ ರಾವ್ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!