ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಕಾಕ್‌ರೋಚ್ ಜನತಾ ಪಾರ್ಟಿ ಶನಿವಾರ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಉದ್ದೇಶಿಸಿರುವ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಪ್ರತಿಭಟನೆಗೆ ಪೊಲೀಸರು ಅನುಮತಿ ನಿರಾಕರಿಸಿದ್ದು, ಮೆಟ್ರೋ ಸಂಚಾರ ಮತ್ತು ರೈಲು ಸೇವೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.
ಪ್ರತಿಭಟನೆಗೆ ಪೊಲೀಸರ ಅನುಮತಿ ನಿರಾಕರಣೆ
ನಿಯಮದಂತೆ 10 ದಿನಗಳ ಮುಂಚಿತ ಮಾಹಿತಿ ನೀಡದಿರುವುದು ಹಾಗೂ ಹಿಂದಿನ ಪ್ರತಿಭಟನೆಯಲ್ಲಿ ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವ ಆರೋಪಗಳನ್ನು ಉಲ್ಲೇಖಿಸಿ ದೆಹಲಿ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಕೇಂದ್ರ ದೆಹಲಿಯ ಕೆಲವು ಪ್ರದೇಶಗಳಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 163ರ ಅಡಿಯಲ್ಲಿ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ. ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದಾರೆ.
57 ಮೆಟ್ರೋ ನಿಲ್ದಾಣಗಳಲ್ಲಿ ನಿರ್ಬಂಧ
ಅಕ್ಟೋಬರ್ 10ರಂದು ಪ್ರತಿಭಟನೆ ನಡೆಯುವ ಹಿನ್ನೆಲೆಯಲ್ಲಿ 57 ಮೆಟ್ರೋ ನಿಲ್ದಾಣಗಳಲ್ಲಿ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಮುಚ್ಚುವ ಕುರಿತು ಸಲಹೆ ನೀಡಲಾಗಿದೆ. ಅಕ್ಟೋಬರ್ 9ರ ರಾತ್ರಿ 9 ಗಂಟೆಯಿಂದ ನಿರ್ಬಂಧ ಜಾರಿಯಾಗಲಿದೆ ಎಂದು ವರದಿ ಹೇಳಿದೆ. ರಾಜೀವ್ ಚೌಕ್, ಸೆಂಟ್ರಲ್ ಸೆಕ್ರೆಟರಿಯಟ್, ನವದೆಹಲಿ, ಕಾಶ್ಮೀರಿ ಗೇಟ್, ಐಟಿಒ ಮತ್ತು ಖಾನ್ ಮಾರ್ಕೆಟ್ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ತೊಂದರೆಯಾಗುವ ಸಾಧ್ಯತೆಯಿದೆ. ಪ್ರಯಾಣ ಆರಂಭಿಸುವ ಮುನ್ನ ಮೆಟ್ರೋ ಸೇವೆಯ ಇತ್ತೀಚಿನ ಮಾಹಿತಿಯನ್ನು ಪರಿಶೀಲಿಸುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ:
ಹಲವು ರೈಲುಗಳ ಸಂಚಾರ ರದ್ದು
ಶನಿವಾರ ಬೆಳಗ್ಗೆ 4ರಿಂದ ಮಧ್ಯಾಹ್ನ 2ರವರೆಗೆ ನವದೆಹಲಿ ಮತ್ತು ಹಜರತ್ ನಿಜಾಮುದ್ದೀನ್ ನಿಲ್ದಾಣಗಳಿಗೆ ಆಗಮಿಸಬೇಕಿದ್ದ ಕೆಲವು ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ವರದಿ ತಿಳಿಸಿದೆ. ಪ್ರಯಾಣಿಕರು ರೈಲುಗಳ ಸ್ಥಿತಿಯನ್ನು ಮುಂಚಿತವಾಗಿ ಖಚಿತಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ.
23 ಸಾವಿರಕ್ಕೂ ಹೆಚ್ಚು ಸಿಬ್ಬಂದಿಯಿಂದ ಭದ್ರತೆ
ರಾಜಧಾನಿಯಲ್ಲಿ ಸುಮಾರು 23 ಸಾವಿರ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಸಿಬ್ಬಂದಿಯನ್ನು ನಿಯೋಜಿಸುವ ಯೋಜನೆ ರೂಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಬ್ಯಾರಿಕೇಡ್‌ಗಳು, ಸಿಸಿಟಿವಿ ಮತ್ತು ಮುಖ ಗುರುತಿಸುವ ಕ್ಯಾಮೆರಾಗಳ ಮೂಲಕ ನಿಗಾ ಇರಿಸಲಾಗುತ್ತದೆ. ನೆರೆಯ ಉತ್ತರ ಪ್ರದೇಶ ಮತ್ತು ಹರಿಯಾಣ ರಾಜ್ಯಗಳಿಗೂ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.



