ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಮಾರ್ಟ್‌ಫೋನ್ ಎನ್ನುವುದು ಇಂದು ನಮ್ಮ ಜೇಬಿನಲ್ಲಿರುವ ಒಂದು ಪುಟ್ಟ ಮ್ಯಾಜಿಕ್ ಬಾಕ್ಸ್ ಇದ್ದಂತೆ. ನಮ್ಮ ಬಾಲ್ಯದ ನೆನಪುಗಳು, ಪ್ರವಾಸದ ಮಧುರ ಕ್ಷಣಗಳು, ಸ್ನೇಹಿತರೊಂದಿಗಿನ ಸ್ವೀಟ್ ಮೊಮೆಂಟ್ಸ್ ಎಲ್ಲವೂ ಈ ಫೋನಿನ ಡಿಜಿಟಲ್ ಬಾಕ್ಸ್ ನಲ್ಲಿ ಭದ್ರವಾಗಿ ಕೂತಿರುತ್ತವೆ. ಆದರೆ, ಒಂದು ದಿನ ಮೆಮೊರಿ ಫುಲ್ ಆದಾಗ ಅಥವಾ ಬೇಡದ ಫೋಟೊಗಳನ್ನು ನೋಡಿದಾಗ ನಮ್ಮ ಕೈಗಳು ತಾನಾಗಿಯೇ ‘ಡಿಲೀಟ್’ ಎನ್ನುವ ಬಟನ್ ಮೇಲೆ ಒತ್ತುತ್ತವೆ. ಆಗ ನಮಗೆ ಅನಿಸುವುದು ಇಷ್ಟೇ “ಆ ಫೋಟೊ ಕಥೆ ಮುಗಿಯಿತು, ಫೋನ್ ಈಗ ಸ್ಟೋರೇಜ್ ಫ್ರೀ ಆಯಿತು” ಎಂದು. ಆದರೆ ಅಸಲಿ ಕಥೆ ಶುರುವಾಗುವುದೇ ಇಲ್ಲಿಂದ!
ರೀಸೆಂಟ್ಲಿ ಡಿಲೀಟೆಡ್
ನಾವು ಫೋಟೋ ಗ್ಯಾಲರಿಯಲ್ಲಿ ಯಾವುದಾದರೂ ಚಿತ್ರವನ್ನು ಆಯ್ಕೆ ಮಾಡಿ ಡಿಲೀಟ್ ಮಾಡಿದಾಕ್ಷಣ, ಅದು ನೇರವಾಗಿ ಮೊಬೈಲ್‌ನ ‘ಟ್ರ್ಯಾಶ್’ ಅಥವಾ ‘ರಿಸೈಕಲ್ ಬಿನ್’ ಫೋಲ್ಡರ್‌ಗೆ ಹೋಗಿ ಬೀಳುತ್ತದೆ. ಆಪಲ್ ಅಥವಾ ಆಂಡ್ರಾಯ್ಡ್ ಫೋನ್‌ಗಳಿರಲಿ, ಅವುಗಳು ಸಾಮಾನ್ಯವಾಗಿ ಈ ಫೋಟೋಗಳನ್ನು 30 ರಿಂದ 60 ದಿನಗಳವರೆಗೆ ತಮ್ಮ ಬಳಿ ಭದ್ರವಾಗಿ ಇಟ್ಟುಕೊಳ್ಳುತ್ತವೆ.
ಯಾಕೆ ಗೊತ್ತೇ? ಒಂದು ವೇಳೆ ನೀವು ಆಕಸ್ಮಿಕವಾಗಿ ಮುಖ್ಯವಾದ ಫೋಟೋವನ್ನು ಡಿಲೀಟ್ ಮಾಡಿದ್ದರೆ, ಅದನ್ನು ವಾಪಸ್ ಪಡೆದುಕೊಳ್ಳಲು ಇದು ಒಂದು ಸೇಫ್ ಜಾಗ. ಅಂದರೆ, ನೀವು ಫೋನ್‌ನಿಂದ ಫೋಟೋ ಡಿಲೀಟ್ ಮಾಡಿದ ತಕ್ಷಣ ಅದು ಸಂಪೂರ್ಣವಾಗಿ ನಾಶವಾಗಿರುವುದಿಲ್ಲ, ಬದಲಿಗೆ ಈ ಫೋಲ್ಡರ್ ನಲ್ಲಿ ಹೋಗಿ ಕುಳಿತಿರುತ್ತದೆ.
ಪರ್ಮನೆಂಟ್ ಡಿಲೀಟ್
ಸರಿ, ಈಗ ನೀವು ಆ ‘ರಿಸೈಕಲ್ ಬಿನ್’ ಗೂ ಹೋಗಿ ಅಲ್ಲಿರುವ ಫೋಟೋಗಳನ್ನು ಪರ್ಮನೆಂಟ್ ಆಗಿ ಡಿಲೀಟ್ ಮಾಡಿದ್ದೀರಿ ಎಂದಿಟ್ಟುಕೊಳ್ಳಿ. ಈಗಲಾದರೂ ಆ ಫೋಟೋ ಶಾಶ್ವತವಾಗಿ ಮಾಯವಾಯಿತೇ?
ಇಲ್ಲವೇ ಇಲ್ಲ. ಇಲ್ಲೇ ತಂತ್ರಜ್ಞಾನದ ಅತಿ ದೊಡ್ಡ ಅಚ್ಚರಿ ಅಡಗಿದೆ. ಕಂಪ್ಯೂಟರ್ ಸೈನ್ಸ್ ಭಾಷೆಯಲ್ಲಿ ಹೇಳುವುದಾದರೆ, ಮೊಬೈಲ್ ಮೆಮೊರಿ ಎನ್ನುವುದು ಒಂದು ದೊಡ್ಡ ಗ್ರಂಥಾಲಯವಿದ್ದಂತೆ. ಫೋಟೊಗಳು ಅದರಲ್ಲಿರುವ ಪುಸ್ತಕಗಳು. ನೀವು ಯಾವುದೋ ಒಂದು ಪುಸ್ತಕವನ್ನು ‘ಡಿಲೀಟ್’ ಮಾಡಿದಾಗ, ಗ್ರಂಥಾಲಯದ ನಿರ್ವಾಹಕರು ಆ ಪುಸ್ತಕದ ಮೇಲಿನ ಸೂಚ್ಯಂಕವನ್ನು ಮಾತ್ರ ಹರಿದುಹಾಕುತ್ತಾರೆ.
ಅಂದರೆ, ನಿಮ್ಮ ಫೋನಿಗೆ ಆ ಫೋಟೊ ಇರುವ ಜಾಗ ಈಗ ‘ಖಾಲಿ’ ಎಂದು ಕಾಣಿಸುತ್ತದೆ. ಆದರೆ, ಅಸಲಿ ಫೋಟೊ ಬಿಟ್‌ಗಳು ಮಾತ್ರ ಫೋನಿನ ಮೆಮೊರಿ ಚಿಪ್‌ನ ಮೂಲೆಯಲ್ಲಿ ಹಾಗೆಯೇ ಉಳಿದಿರುತ್ತವೆ. ಅಲ್ಲಿಯವರೆಗೆ ಹೊಸದಾದ ಯಾವುದೇ ಡಾಟಾ ಬಂದು ಆ ಜಾಗವನ್ನು ಆಕ್ರಮಿಸಿಕೊಳ್ಳುವುದಿಲ್ಲವೋ, ಅಲ್ಲಿಯವರೆಗೆ ಆ ಹಳೆ ಫೋಟೋ ಅಲ್ಲಿಯೇ ಇರುತ್ತದೆ.
ರಿಕವರಿ ಮ್ಯಾಜಿಕ್
ಯಾರಾದರೂ ಹಾರ್ಡ್‌ವೇರ್ ಇಂಜಿನಿಯರ್ ಅಥವಾ ವಿಶೇಷ ‘ಡಾಟಾ ರಿಕವರಿ ಸಾಫ್ಟ್‌ವೇರ್’ ಬಳಸಿ ನಿಮ್ಮ ಫೋನ್ ಸ್ಕಾನ್ ಮಾಡಿದರೆ, ಈ ರೀತಿ ಅಳಿಸಿಹೋದ ಫೋಟೊಗಳನ್ನು ಸುಲಭವಾಗಿ ಮರುಪಡೆಯಬಹುದು. ಸೈಬರ್ ಅಪರಾಧ ತನಿಖೆಗಳಲ್ಲಿ ಅಥವಾ ಫೋರೆನ್ಸಿಕ್ ತನಿಖೆಯಲ್ಲಿ ಇದು ತುಂಬಾನೇ ಸಹಾಯಕ್ಕೆ ಬರುತ್ತದೆ. ವರ್ಷಗಳ ಹಿಂದೆ ಡಿಲೀಟ್ ಮಾಡಿದ ಫೋಟೋಗಳನ್ನು ಸಹ ತಜ್ಞರು ಹೀಗೆ ಹೊರತೆಗೆಯಬಲ್ಲರು.
ಗೌಪ್ಯತೆ ಕಾಪಾಡಿಕೊಳ್ಳುವುದು ಹೇಗೆ?
ಇದರಿಂದ ನಾವು ತಿಳಿದುಕೊಳ್ಳಬೇಕಾದ ಪ್ರಮುಖ ಪಾಠವೇನೆಂದರೆ ಡಿಜಿಟಲ್ ಜಗತ್ತಿನಲ್ಲಿ ಒಮ್ಮೆ ಅಪ್‌ಲೋಡ್ ಆದ ಅಥವಾ ತೆಗೆದ ಫೋಟೋ ಎಂದಿಗೂ ಸಂಪೂರ್ಣವಾಗಿ ಮಾಯವಾಗುವುದಿಲ್ಲ.
ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ಮಾರಾಟ ಮಾಡುವಾಗ ಅಥವಾ ಬೇರೆಯವರಿಗೆ ಕೊಡುವಾಗ, ಕೇವಲ ಫೋಟೊಗಳನ್ನು ಡಿಲೀಟ್ ಮಾಡಿದರೆ ಸಾಲದು. ಫೋನ್ ಅನ್ನು ಸಂಪೂರ್ಣವಾಗಿ ‘ಫ್ಯಾಕ್ಟರಿ ರೀಸೆಟ್’ ಮಾಡಬೇಕು. ಸಾಧ್ಯವಾದರೆ ಮೆಮೊರಿ ಚಿಪ್ ಅನ್ನು ಸುರಕ್ಷಿತವಾಗಿ ನಾಶಪಡಿಸುವುದು ಉತ್ತಮ.
ಒಟ್ಟಿನಲ್ಲಿ, ಫೋನ್‌ನಿಂದ ಒಂದು ಫೋಟೋವನ್ನು ಅಳಿಸುವುದು ಎಂದರೆ ಕಣ್ಣಿಗೆ ಕಾಣದಂತೆ ಎಲ್ಲಿಯೋ ಉಳಿದುಕೊಂಡಿರುತ್ತೆ ಹೊರತು, ಡಿಜಿಟಲ್ ಪ್ರಪಂಚದಿಂದ ಶಾಶ್ವತವಾಗಿ ಅಳಿಸಿಹಾಕಿದ ಹಾಗಲ್ಲ. ಆದ್ದರಿಂದ ನಿಮ್ಮ ಖಾಸಗಿ ಚಿತ್ರಗಳನ್ನು ಡಿಲೀಟ್ ಮಾಡುವಾಗ ಎಚ್ಚರಿಕೆ ವಹಿಸುವುದು ಅತ್ಯಂತ ಜಾಣತನದ ಕೆಲಸ.



