40 ಪರ್ಸೆಂಟ್ ಕಮಿಷನ್ ಆರೋಪವನ್ನು ಸಾಕ್ಷಿ ಸಮೇತ ಸಾಬೀತುಪಡಿಸಿ: ಸಿದ್ದು ಸರಕಾರಕ್ಕೆ ಬೊಮ್ಮಾಯಿ ಒತ್ತಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಹಿಂದಿನ ಬಿಜೆಪಿ ಸರಕಾರ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪವನ್ನು ಸಾಕ್ಷಿ ಸಮೇತ ಸಾಬೀತುಪಡಿಸಬೇಕು ಎಂದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಒತ್ತಾಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರಗಳ ಅವಧಿಯಲ್ಲಿ ನಡೆದಿದೆ ಎನ್ನಲಾದ ಹಗರಣಗಳು ಅಥವಾ ಅಕ್ರಮಗಳ ಬಗ್ಗೆ ತನಿಖೆ ನಡೆಸಿ, ಸತ್ಯ ಹೊರಬರಲಿ ಎಂದು ಒತ್ತಾಯಿಸಿದ್ದಾರೆ.

‘ನಾನು ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ. ಅವರು ತನಿಖೆ ಮಾಡಲಿ. 40 ಪರ್ಸೆಂಟ್ ಕಮಿಷನ್ ಆಪಾದನೆ ಮಾಡಿದ್ದು, ಅದನ್ನು ಈಗ ಸಾಕ್ಷ್ಯ ಸಮೇತ ಸಾಬೀತುಪಡಿಸಲಿ.ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು, ಎಲ್ಲ ಪುರಾವೆಗಳೊಂದಿಗೆ 40 ಪರ್ಸೆಂಟ್ ಕಮಿಷನ್ ಇದೆ ಎಂದು ತೋರಿಸಬೇಕೆಂದು ನಾನು ಒತ್ತಾಯಿಸುತ್ತೇನೆ’ ಎಂದು ಬೊಮ್ಮಾಯಿ ಹೇಳಿದ್ದಾರೆ.

ಪಿಎಸ್ಐ ನೇಮಕಾತಿ ಹಗರಣದ ಬಗ್ಗೆ ತನಿಖೆ ನಡೆಸಲಾಗುವುದು ಎಂಬ ಹೇಳಿಕೆಗೆ ಸಂಬಂಧಿಸಿದಂತೆ, ‘ಅವರು ಎಲ್ಲವನ್ನೂ ತನಿಖೆ ಮಾಡಲಿ. ಅವರ (ಹಿಂದಿನ ಕಾಂಗ್ರೆಸ್) ಅಧಿಕಾರಾವಧಿಯಲ್ಲಿ ನಡೆದಿರುವ ಹಗರಣಗಳ ಕುರಿತು ಲೋಕಾಯುಕ್ತ ಮತ್ತು ಸಿಐಡಿಗೆ ಪ್ರಕರಣಗಳನ್ನು ನೀಡಿದ್ದೇವೆ. ಅವರ ಮತ್ತು ನಮ್ಮ (ಬಿಜೆಪಿ) ಅವಧಿಯಲ್ಲಿ ಏನಾಯಿತು ಎಂಬುದನ್ನು ತನಿಖೆ ಮಾಡಿ, ಸತ್ಯ ಹೊರತರಲಿ ಎಂದರು.

ಭಾನುವಾರ ಮಳೆಯಿಂದಾಗಿ ಸಂಭವಿಸಿದ ಸಾವಿನ ಬಗ್ಗೆ ಮಾಜಿ ಮುಖ್ಯಮಂತ್ರಿ ನೋವು ವ್ಯಕ್ತಪಡಿಸಿದ್ದಾರೆ ಮತ್ತು ಮಳೆಯ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದರೂ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ದೂರಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!