ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಡವರಿಗೆ ಅನುಕೂಲವಾಗುವಂತೆ ತಮಿಳು ಮಾಧ್ಯಮದಲ್ಲೇ ವೈದ್ಯಕೀಯ ಶಿಕ್ಷಣ ನೀಡಬೇಕು ಎಂದು ತಮಿಳುನಾಡಿನ ಡಿಎಂಕೆ ಸರ್ಕಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದರು.
8,900 ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ವಿವಿಧ ಯೋಜನೆಗಳನ್ನು ದೇಶಕ್ಕೆ ಸಮರ್ಪಿಸಿ ಅವರು ಮಾತನಾಡಿದರು.
ರಾಮ ನವಮಿಯಯ ದಿನವೂ ಆದ ಇಂದು, ಭಗವಾನ್ ಶ್ರೀರಾಮನ ಉತ್ತಮ ಆಡಳಿತ ದೇಶ ನಿರ್ಮಾಣಕ್ಕೆ ಬುನಾದಿ ಎಂದರು.
ಇದೇ ವೇಳೆ, ತಮಿಳು ಭಾಷೆಯ ಪರ ಮಾತನಾಡುತ್ತಾ, ತಮಿಳು ಭಾಷೆ ಮತ್ತು ಪರಂಪರೆಯನ್ನು ವಿಶ್ವಾದ್ಯಂತ ಕೊಂಡೊಯ್ಯುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದರು.
ಯಾರ ಹೆಸರನ್ನೂ ಹೇಳದೆ, ‘ನಾನು ತಮಿಳುನಾಡಿನ ನಾಯಕರುಗಳಿಂದ ಪತ್ರಗಳನ್ನು ಸ್ವೀಕರಿಸುತ್ತಿದ್ದೇನೆ. ಅದರಲ್ಲಿ ಅವರು ತಮಿಳಿನಲ್ಲಿ ಸಹಿ ಹಾಕಿರುವುದಿಲ್ಲ. ಕನಿಷ್ಠ ಪಕ್ಷ ನಿಮ್ಮ ಸಹಿಯನ್ನು ತಮಿಳಿನಲ್ಲಿ ಹಾಕಿ’ ಎಂದು ಮೋದಿ ಟಾಂಗ್ ಕೊಟ್ಟರು.
ರಾಜ್ಯದ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ತಮಿಳು ಮಾಧ್ಯಮದಲ್ಲೇ ವೈದ್ಯಕೀಯ ಶಿಕ್ಷಣ ನೀಡುವಂತೆ ಹೇಳಿದರು. ಇದೇ ಸಂದರ್ಭದಲ್ಲಿ, ತಮಿಳುನಾಡಿಗೆ ಅನುದಾನ ಹೆಚ್ಚಿಸಿದರೂ ಕೆಲವರು ಮತ್ತಷ್ಟು ನಿಧಿಗಾಗಿ ಅಳುತ್ತಿದ್ದಾರೆ ಎಂದು ಟೀಕಿಸಿದರು.