August 23, 2026
Sunday, August 23, 2026
spot_img

ರೈತರ ಕೃಷಿ ಚಟುವಟಿಕೆಗೆ ನೀರಾವರಿ ಸೌಲಭ್ಯ ಕಲ್ಪಿಸುವುದು ಸರ್ಕಾರದ ಪ್ರಮುಖ ಆದ್ಯತೆ: ಎನ್.ಎಸ್.ಬೋಸರಾಜು

ಹೊಸದಿಗಂತ ವರದಿ ರಾಯಚೂರು:

ರೈತರ ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ನೀರಿನ ಸೌಲಭ್ಯ ಕಲ್ಪಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಕೃಷಿ ಕ್ಷೇತ್ರದಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ನೀರಾವರಿ ಸೌಲಭ್ಯ ಅತ್ಯಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಬೋರ್‌ವೆಲ್‌ಗಳ ಮೂಲಕ ನೀರಿನ ಸೌಲಭ್ಯ ಕಲ್ಪಿಸುವ ಕಾರ್ಯಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಮಾಜಿ ಸಚಿವ ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜು ಹೇಳಿದರು.

 ರಾಯಚೂರು ತಾಲ್ಲೂಕಿನ ಗ್ರಾಮೀಣ ಭಾಗದ 14 ಹಳ್ಳಿಗಳ 30 ಫಲಾನುಭವಿ ರೈತರಿಗೆ ಪಂಪ್‌ಸೆಟ್‌ಗಳನ್ನು ವಿತರಿಸಿ ಮಾತನಾಡಿದ ಅವರು, ರೈತರ ಬೇಡಿಕೆ ಹಾಗೂ ಅಗತ್ಯಕ್ಕೆ ಅನುಗುಣವಾಗಿ ಬೋರ್‌ವೆಲ್‌ಗಳನ್ನು ಮಂಜೂರು ಮಾಡಲಾಗಿದ್ದು, ಬೋರ್‌ವೆಲ್‌ಗಳಿಂದ ನೀರನ್ನು ಕೃಷಿ ಜಮೀನುಗಳಿಗೆ ಪೂರೈಸಲು ಪಂಪ್‌ಸೆಟ್‌ಗಳ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಅರ್ಹ ರೈತ ಫಲಾನುಭವಿಗಳಿಗೆ ಪಂಪ್‌ಸೆಟ್‌ಗಳನ್ನು ವಿತರಿಸಲಾಗುತ್ತಿದೆ ಇದರಿಂದ ರೈತರು ತಮ್ಮ ಜಮೀನುಗಳಲ್ಲಿ ಸಮರ್ಪಕವಾಗಿ ನೀರಾವರಿ ಮಾಡಿಕೊಂಡು ಕೃಷಿ ಉತ್ಪಾದನೆ ಹೆಚ್ಚಿಸಿಕೊಳ್ಳಲು ಅನುಕೂಲವಾಗಲಿದೆ ಎಂದು ತಿಳಿಸಿದರು.

 ಕೃಷಿ ಕ್ಷೇತ್ರದಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ನೀರಾವರಿ ಸೌಲಭ್ಯಗಳ ವಿಸ್ತರಣೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಬೋರ್‌ವೆಲ್ ಸೌಲಭ್ಯ ದೊರೆತಿರುವ ರೈತರಿಗೆ ಪಂಪ್‌ಸೆಟ್ ಸೇರಿದಂತೆ ಅಗತ್ಯ ಪರಿಕರಗಳನ್ನು ಒದಗಿಸುವುದರಿಂದ ಜಮೀನುಗಳಿಗೆ ಸಮರ್ಪಕವಾಗಿ ನೀರು ಪೂರೈಸಲು ಸಾಧ್ಯವಾಗುತ್ತದೆ. ಇದರಿಂದ ರೈತರು ಮಳೆ ಅವಲಂಬನೆ ಕಡಿಮೆ ಮಾಡಿಕೊಂಡು ವರ್ಷವಿಡೀ ವಿವಿಧ ಬೆಳೆಗಳನ್ನು ಬೆಳೆಯಲು ಅನುಕೂಲವಾಗಲಿದೆ. ರೈತರ ಆದಾಯ ಹೆಚ್ಚಿಸುವ ಮೂಲಕ ಅವರ ಜೀವನಮಟ್ಟ ಸುಧಾರಿಸುವುದು ತಮ್ಮ ಉದ್ದೇಶವಾಗಿದೆ ಎಂದು ಹೇಳಿದರು.

ಇದನ್ನೂ ಓದಿ;

 ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಹಾಗೂ ಕೃಷಿಯನ್ನು ಲಾಭದಾಯಕವಾಗಿಸಲು ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ನಿರಂತರವಾಗಿ ಪ್ರಯತ್ನಿಸಲಾಗುವುದು. ರೈತರ ಸಮಸ್ಯೆಗಳಿಗೆ ಸ್ಪಂದಿಸಿ, ಅಗತ್ಯ ಸೌಲಭ್ಯಗಳನ್ನು ಒದಗಿಸಲು ಬದ್ಧನಾಗಿದ್ದೇನೆ ಎಂದು ತಿಳಿಸಿದರು.

 ಈ ಸಂದರ್ಭದಲ್ಲಿ ಮುಖಂಡರಾದ ಕೆ.ಶಾಂತಪ್ಪ, ಜಯಣ್ಣ, ಮೊಹಮ್ಮದ್ ಶಾಲಂ, ರವಿ ಪಾಟೀಲ, ಕುರಬದೊಡ್ಡಿ ಆಂಜನೇಯ್ಯ, ಚುಕ್ಕಿ ಶಿವಕುಮಾರ, ಅಮರೇಗೌಡ ಹಂಚಿನಾಳ, ತಿಮ್ಮಪ್ಪ ಮ್ಯಾತ್ರಿ, ಮಹದೇವ, ಬೋಳಬಂಡಿ, ವೀರೇಶ ರಜಲಬಂಡಾ, ಯೇಸು ಸೇರಿದಂತೆ ಹಲವು ರೈತರು ಹಾಗೂ ಮುಖಂಡರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !