ರೋಹಿಂಗ್ಯಾ ನಿರಾಶ್ರಿತರಿಗೆ ನೀರು,ವಿದ್ಯುತ್‌ ಒದಗಿಸುವುದು ನಮ್ಮ ಜವಾಬ್ದಾರಿ: ಫಾರೂಕ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಮ್ಮು ಮತ್ತು ಕಾಶ್ಮೀರದಲ್ಲಿರುವ ರೋಹಿಂಗ್ಯಾ ನಿರಾಶ್ರಿತರಿಗೆ ನೀರು ಮತ್ತು ವಿದ್ಯುತ್‌ನಂತಹ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ನಮ್ಮ ಸರ್ಕಾರದ ಜವಾಬ್ದಾರಿ ಎಂದು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.

ಕೇಂದ್ರ ಸರ್ಕಾರ ಈ ನಿರಾಶ್ರಿತರನ್ನು ಇಲ್ಲಿಗೆ ಕಳುಹಿಸಿದೆ. ನಾವು ಅವರನ್ನು ಕರೆತಂದಿಲ್ಲ. ಅವರು ಇಲ್ಲಿರುವವರೆಗೂ ಅವರಿಗೆ ನೀರು, ವಿದ್ಯುತ್ ಒದಗಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.

ಜಮ್ಮು ನಗರದಲ್ಲಿ ರೊಹಿಂಗ್ಯಾಗಳು ಮತ್ತು ಬಾಂಗ್ಲಾದೇಶೀಯರ ನೆಲೆಯನ್ನು ರಾಜಕೀಯ ಪಿತೂರಿ ಎಂದು ಬಿಜೆಪಿ ಬಣ್ಣಿಸಿದ್ದು ಈ ಬಗ್ಗೆ ಸಿಬಿಐ ತನಿಖೆಗೆ ನಡೆಸಬೇಕು ಎಂದು ಒತ್ತಾಯಿಸಿದ ಒಂದು ದಿನದ ನಂತರ ಫಾರೂಕ್ ಅಬ್ದುಲ್ಲಾ ಈ ಹೇಳಿಕೆ ನೀಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ 13,700ಕ್ಕೂ ಹೆಚ್ಚು ವಿದೇಶಿ ನಿರಾಶ್ರಿತರು ನೆಲೆಸಿದ್ದಾರೆ.

ಅವರಲ್ಲಿ ಹೆಚ್ಚಿನವರು ರೋಹಿಂಗ್ಯಾ (ಮ್ಯಾನ್ಮಾರ್‌ನಿಂದ ಬಂದ ಅಕ್ರಮ ವಲಸಿಗರು) ಮತ್ತು ಬಾಂಗ್ಲಾದೇಶಿ ಪ್ರಜೆಗಳು. 2008 ಮತ್ತು 2016ರ ನಡುವೆ ಅವರ ಸಂಖ್ಯೆ 6,000ಕ್ಕಿಂತ ಹೆಚ್ಚು ಹೆಚ್ಚಾಗಿದೆ. ಮಾರ್ಚ್ 2021ರಲ್ಲಿ, ಜಮ್ಮು ನಗರದಲ್ಲಿ ಪರಿಶೀಲನೆ ಕಾರ್ಯಾಚರಣೆಯಲ್ಲಿ 270ಕ್ಕೂ ಹೆಚ್ಚು ರೋಹಿಂಗ್ಯಾಗಳನ್ನು ಪೊಲೀಸರು ಬಂಧಿಸಿದರು. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಅಕ್ರಮವಾಗಿ ವಾಸಿಸುತ್ತಿರುವುದನ್ನು ಪತ್ತೆ ಹಚ್ಚಿ ಕತ್ರಾ ಉಪ ಜೈಲಿನಲ್ಲಿರುವ ಹಿಡುವಳಿ ಕೇಂದ್ರಕ್ಕೆ ಕಳುಹಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!