ಹೊಸದಿಗಂತ ವರದಿ, ಬಳ್ಳಾರಿ:
ಪಿಎಸ್ಐ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಪ್ರೀಯಾಂಕ ಖರ್ಗೆ ನಮ್ಮವರ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ, ದಾಖಲಾತಿಗಳಿದ್ದರೇ ಬಹಿರಂಗಪಡಿಸಲಿ ಎಂದು ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಹೇಳಿದರು.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರೀಕ್ಷೆ ಅಕ್ರಮದ ವಿರುದ್ಧ ಪ್ರೀಯಾಂಕ ಖರ್ಗೆ ಸೇರಿದಂತೆ ಕೈ ನಾಯಕರು ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ್ ಅವರ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ, ಈ ಆರೋಪ ರಾಜಕೀಯ ಪ್ರೇರಿತವಾಗಿದೆ. ಪಿಎಸ್ಐ ಪರೀಕ್ಷೆ ಅಕ್ರಮದ ಕುರಿತು ನಮ್ಮ ಅಧಿಕಾರಿಗಳು ಮುಟ್ಟಿನೋಡಿಕೊಳ್ಳುವ ಹಾಗೆ ತನಿಖೆ ಮುಂದುವರೆಸಿದ್ದಾರೆ, ಅಪರಾಧ ಮಾಡಿದವರು ಎಷ್ಟೇ ಪ್ರಭಾವಿಗಳಿರಲಿ, ಯಾರೇ ಇರಲಿ ರಕ್ಷಿಸುವ ಮಾತೇ ಇಲ್ಲ, ಇಂತಹ ಪ್ರಕರಣಗಳು ಮತ್ತೆ ಮರುಕಳಿಸದಂತೆ ಸರ್ಕಾರ ಅನೇಕ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಪ್ರಕರಣದಲ್ಲಿ ಸಾಕಷ್ಟು ಜನ ಅಧಿಕಾರಿಗಳನ್ನು ಮುಲಾಜಿಲ್ಲದೇ ಅಮಾನತ್ತು ಮಾಡಲಾಗಿದೆ, ದಿನಕ್ಕೊಂದು ಹೇಳಿಕೆ ನೀಡಿ ಗೊಂದಲ ಸೃಷ್ಟಿಸುವಲ್ಲಿ ಪ್ರೀಯಾಂಕ ಖರ್ಗೆ ಮುಂದಾಗಿದ್ದಾರೆ, ಅವರ ಈ ಆಟ ನಡೆಯೋಲ್ಲ, ಸಿಐಡಿ ಅಧಿಕಾರಿಗಳ ಬಳಿ ಸೂಕ್ತ ಸಾಕ್ಷಾದಾರಗಳನ್ನು ಒದಗಿಸಲಿ, ಆರೋಪ ಸಾಬೀತಾದರೇ ರಾಜೀನಾಮೆ ನೀಡಲಿದ್ದಾರೆ ಎಂದು ಪ್ರೀಯಾಂಕ ವಿರುದ್ಧ ಕಿಡಿಕಾರಿದರು. ಈ ಸಂದರ್ಭದಲ್ಲಿ ಬೂಡಾ ಅಧ್ಯಕ್ಷ ಕಾರ್ಕಲತೋಟ ಪಾಲನ್ನ, ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎಸ್.ಗುರುಲಿಂಗನಗೌಡ, ಎಪಿಎಂಸಿ ಅಧ್ಯಕ್ಷ ಉಮೇಶ್ ಇತರರಿದ್ದರು.