ಪಿಎಸ್‌ಐ ಪರೀಕ್ಷೆಯಲ್ಲಿ ಹಗರಣ: ಮೂರು ಆರೋಪಿಗಳ ಬಂಧನ

ಹೊಸದಿಗಂತ ವರದಿ,ಬೆಂಗಳೂರು:

2021ರಲ್ಲಿ 545 ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಪಿಎಸ್‌ಐ) ಹುದ್ದೆಗಾಗಿ ನಡೆದ ಲಿಖಿತ ಪರೀಕ್ಷೆಯಲ್ಲಿ ಅಕ್ರಮ ನೇಮಕ ಹಗರಣದಲ್ಲಿ ಕಲಬುರಗಿ ಮತ್ತು ಅಶೋಕನಗರ ಪೊಲೀಸ್ ಠಾಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಆರೋಪಿಗಳನ್ನು ಅಪರಾಧ ತನಿಖಾ ಇಲಾಖೆ(ಸಿಐಡಿ) ಯ ಎಫ್‌ ಐಯು ಘಟಕದ ಅಧಿಕಾರಿಗಳು ಬಂಧಿಸಿದ್ದಾರೆ.

ಕಲಬುರಗಿ ಜಿಲ್ಲೆಯ ಶಹಬಾದ್‌ನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಆರೋಪಿ ಚಂದ್ರಕಾಂತ್ ತಿಪ್ಪಣ್ಣ ಪ್ಯಾಟಿ, ಅಫಲ್‌ಪುರದ ಹಿಂದುಳಿದ ವರ್ಗಗಳ ಇಲಾಖೆಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳ ವಸತಿ ನಿಲಯದ ಸೂಪರಿಂಟೆಂಡೆಂಟ್ ಬಸವರಾಜ್ ಸಿದ್ದರಾಮಪ್ಪ ಹಾಗೂ ಬಿ.ಕಾಂ ವಿದ್ಯಾರ್ಥಿ ಶಶಿಧರ್‌ನನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ. ಕಳೆದೆರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಆರ್.ಡಿ.ಪಾಟೀಲ್‌ನ ಬಲಗೈ ಬಂಟರಾಗಿದ್ದ ಮೂವರು ಆರೋಪಿಗಳು, ಪರೀಕ್ಷಾ ಅಭ್ಯರ್ಥಿಗಳಿಗೆ ಬ್ಲೂಟೂತ್ ಡಿವೈಸ್ ಮೂಲಕ ಉತ್ತರ ಹೇಳಲು ಸಹಾಯ ಮಾಡಿದ್ದರು ಎಂದು ಪೊಲೀಸರು ತಿಳಿಸಿದರು.

ಮೂವರು ಪಿಎಸ್‌ಐ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿರುವುದಕ್ಕೆ ಕೆಲ ಸಾಕ್ಷ್ಯಾಧಾರಗಳು ಲಭ್ಯವಾಗಿದ್ದು, ಆ ಸಾಕ್ಷ್ಯಾಧಾರಗಳನ್ನು ಜಪ್ತಿ ಮಾಡಲಾಗಿದೆ. ಮೂವರನ್ನು ಕಲಬುರಗಿ ಪ್ರಧಾನ ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಫಾರ್ಮ್‌ ಹೌಸ್‌ನಲ್ಲಿ ಕೂತು ಅಕ್ರಮ:
ಪ್ರಕರಣದಲ್ಲಿ ಈಗಾಗಲೇ ಬಂಧಿತನಾಗಿರುವ ಪ್ರಮುಖ ಆರೋಪಿ ಆರ್.ಡಿ.ಪಾಟೀಲ್ ಮೂಲತಃ ಸೊನ್ನ ಗ್ರಾಮದವನಾಗಿದ್ದು, ತನ್ನ ಸ್ವಂತ ಊರಿನಲ್ಲಿ ಫಾರ್ಮ್‌ ಹೌಸ್ ಹೊಂದಿದ್ದ. ಈ ಪಿಎಸ್‌ಐ ಪರೀಕ್ಷಾ ದಿನ ಚಂದ್ರಕಾಂತಿಪ್ಪಣ್ಣ ಪ್ಯಾಟಿ, ಬಸವರಾಜ್, ಶಶಿಧರ್ ಮೂರು ಜನ ಸೇರಿ ಆತನ ಫಾರ್ಮ್‌ ಹೌಸ್‌ನಲ್ಲಿ ಕೂತು, ಪರೀಕ್ಷೆಯ ಪ್ರಶ್ನೆಪತ್ರಿಕೆ ಸಿಗುತ್ತಿದ್ದಂತೆಯೇ ಆರೋಪಿಗಳು ಉತ್ತರಗಳನ್ನು ಗೂಗಲ್‌ನಲ್ಲಿ ಪತ್ತೆಮಾಡಿ ಸರಿಯಾದ ಉತ್ತರಗಳನ್ನು ಪಾಟೀಲ್‌ಗೆ ತಿಳಿಸುತ್ತಿದ್ದರು. ಬಳಿಕ ಪಾಟೀಲ್ ಈ ಉತ್ತರಗಳನ್ನು ಬ್ಲೂಟೂತ್ ಮೂಲಕ ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿಗಳಿಗೆ ತಿಳಿಸುತ್ತಿದ್ದನು. ಈ ಮೂವರು ಆರೋಪಿಗಳು ಪಾಟೀಲ್ ಹೇಳಿದ ಕೆಲಸಗಳನ್ನು ಅಚ್ಚುಕಟ್ಟಾಗಿ ಯಾರಿಗೂ ಅನುಮಾನ ಬಾರದಂತೆ ಮಾಡಿ ಮುಗಿಸುತ್ತಿದ್ದರು. ಆದ್ದರಿಂದ ಪ್ರತಿಯಾಗಿ ಲಕ್ಷಾಂತರ ರೂಗಳವರೆಗೆ ಪಾಟೀಲ್ ಹಣ ನೀಡುತ್ತಿದ್ದ. ಆರೋಪಿಗಳು ಇತರೆ ಪರೀಕ್ಷಾ ಅಕ್ರಮಗಳಲ್ಲಿ ತೊಡಗಿದ್ದಾರೆಯೇ? ಇಲ್ಲವೆ ಎಂಬುದರ ಕುರಿತು ತನಿಖೆ ಮುಂದುವರೆದಿದೆ ಎಂದು ಮೂಲಗಳು ಹೇಳಿವೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!