ಹೊಸದಿಗಂತ ವರದಿ, ಶಿವಮೊಗ್ಗ:
ಪಿಎಸ್‌ಐ ನೇಮಕಾತಿ ಪ್ರವೇಶ ಪರೀಕ್ಷೆಯಲ್ಲಿ ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರಿಗೆ ಯಾವುದೇ ಅನ್ಯಾಯ ಆಗುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಭರವಸೆ ನೀಡಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿ, ಪಿಎಸ್‌ಐ ನೇಮಕಾತಿ ಪರೀಕ್ಷೆಯ ಓಎಂಆರ್ ಶೀಟ್ ನನಗೆ ದೊರೆತಿತ್ತು. ಅದರಲ್ಲಿ ಬರೆಯದೇ ಇದ್ದ ಪ್ರಶ್ನೆಗಳಿಗೂ ಅಂಕ ನೀಡಿ ಉನ್ನತ ದರ್ಜೆಯಲ್ಲಿ ಪಾಸು ಮಾಡಿದ್ದರು. ಇದರ ಆಧಾರದ ಮೇಲೆ ಸಿಎಂ ಜೊತೆ ಚರ್ಚಿಸಿ ನಾನೇ ಸಿಐಡಿ ತನಿಖೆಗೆ ಆದೇಶ ನೀಡಿದ್ದೇನೆ. ಆಮೂಲಾಗ್ರ ತನಿಖೆ ನಡೆಯುತ್ತಿದೆ. ಪ್ರಾಮಾಣಿಕರಿಗೆ ಯಾವ ತೊಂದರೆಯೂ ಆಗುವುದಿಲ್ಲ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ನಿಶ್ಚಿತ ಎಂದರು.
ತನಿಖೆಯಲ್ಲಿ ಸರ್ಕಾರ ಯಾವುದೇ ಮಧ್ಯ ಪ್ರವೇಶ ಮಾಡುವುದಿಲ್ಲ. ಗುಲ್ಬರ್ಗಾ ಕೇಂದ್ರ ದಿವ್ಯಾ ಹಾಗರಗಿ ಎಂಬುವರಿಗೆ ಸೇರಿದ್ದು , ಅವರೂ ಭಾಗಿಯಾಗಿದ್ದಾರೆ ಎಂಬ ಶಂಕೆ ಇದೆ. ಈಗ ನಾಪತ್ತೆ ಆಗಿದ್ದಾರೆ. ಅವರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಾರೆ. ತಪ್ಪಿತಸ್ಥರ ಹೆಡೆಮುರಿ ಕಟ್ಟದೇ ಬಿಡುವುದಿಲ್ಲ ಎಂದರು.