November 24, 2026
Tuesday, November 24, 2026
spot_img

ಅವೈಜ್ಞಾನಿಕ ನೀರಿನ ದರ ನಿಗದಿ, ಮೀಟರ್ ಅಳವಡಿಕೆಗೆ ಆಕ್ಷೇಪ: ನಗರಸಭೆ ವಿರುದ್ಧ ಸಾರ್ವಜನಿಕರ ಪ್ರತಿಭಟನೆ

ಹೊಸದಿಗಂತ ವರದಿ ರಾಮನಗರ:

ನಗರದಲ್ಲಿ 456 ಕೋಟಿ ವೆಚ್ಚದಲ್ಲಿ 24*7 ಕುಡಿಯುವ ನೀರು ಸರಬರಾಜು ಯೋಜನೆಯಡಿ ಅನುಷ್ಠಾನಗೊಂಡಿರುವ ಕುಡಿಯುವ ನೀರಿನ ಯೋಜನೆ ಹಳ್ಳ ಹಿಡಿದಿದ್ದು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಎರಡು ಗಂಟೆಯೂ ಸಮರ್ಪಕವಾಗಿ ನೀರು ಸಿಗುತ್ತಿಲ್ಲ. ಮೀಟರ್ ಅಳವಡಿಕೆಯಿಂದ ಹೆಚ್ಚಿನ ಬಿಲ್ ಬರುತ್ತಿದ್ದು, ಮೊದಲಿದ್ದ ನೀರು ಪೂರೈಕೆ ವ್ಯವಸ್ಥೆ ಕಲ್ಪಿಸಿ ಎಂದು ಸಾರ್ವಜನಿಕರು ಜಲ ಮಂಡಳಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ನಗರದ 6ನೇ ವಾರ್ಡ್‌ನ ಕಲಾಸಿಪಾಳ್ಯ ನಿವಾಸಿಗಳು ನೀರು ಬಳಸದಿದ್ದರೂ ಸಾವಿರಾರು ರೂಪಾಯಿ ಬಿಲ್ ಬರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಜಲಮಂಡಳಿ ಎದುರು ಧರಣಿ ಕುಳಿತರು. ನಗರಸಭೆ ಹಾಗೂ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾನಿರತರು ಹಿಂದಿನಂತೆ ಸಮರ್ಪಕ ನೀರು ಪೂರೈಕೆ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಮೀಟರ್ ಆಧಾರಿತ ಬಿಲ್ ಪದ್ಧತಿಯನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ನೀರಿನ ಮೀಟರ್‌ಗೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗುತ್ತಿದೆ. ಮೀಟರ್‌ಗಳು ಸರಿಯಿಲ್ಲ, ಸಾವಿರಾರು ಮೊತ್ತದ ಬಿಲ್ ಬರುತ್ತಿದೆ, ಬಡವರು ಹೇಗೆ ಬಿಲ್ ಕಟ್ಟಲು ಸಾಧ್ಯ. ಹಿಂದೆ ಕಡಿಮೆ ಬಿಲ್ ಬರುತ್ತಿತ್ತು ಎಂಬ ದೂರುಗಳು ಆಗ್ಗಾಗ್ಗೆ ಕೇಳುಬರುತ್ತಿತ್ತು. ಈಗ ಜನರ ಆಕ್ರೋಶ ಸ್ಪೋಟಗೊಂಡಿದ್ದು, ಸಾರ್ವಜನಿಕರು ಜಲಮಂಡಳಿ ಕಚೇರಿ ಎದುರು ಪ್ರತಿಭಟನೆಗೆ ಮುಂದಾಗಿದ್ದಾರೆ.

ಅವೈಜ್ಞಾನಿಕ ದರ ನಿಗದಿಗೆ ಆಕ್ರೋಶ

ಮೀಟರ್‌ ರೀಡಿಂಗ್‌ ಆಧಾರದಲ್ಲಿ ನೀರಿನ ದರವನ್ನು ಅವೈಜ್ಞಾನಿಕವಾಗಿ ನಿಗದಿಪಡಿಸಿ ಬಿಲ್‌ ನೀಡಲು ನಗರಸಭೆ ಅನುಮೋದನೆ ನೀಡಿದೆ. ಇದರಿಂದಾಗಿ ನೀರಿನ ಶುಲ್ಕ ಮೂರ್ನಾಲ್ಕು ಪಟ್ಟು ಹೆಚ್ಚಾಗಿ ಸಾವಿರಾರು ರೂಪಾಯಿ ಬರುತ್ತಿದೆ. ಕೂಲಿಕೆಲಸ ಮಾಡುವ ನಾವು ಬಿಲ್ ಕಟ್ಟಲು ಹೇಗೆ ಸಾಧ್ಯ. ನೀರು ಬಳಸದಿದ್ದರೂ ಸಾವಿರಕ್ಕೂ ಹೆಚ್ಚು ಬಿಲ್ ಪಾವತಿಸಬೇಕಾದ ಸ್ಥಿತಿ ಇದೆ ಎಂದು ಪ್ರತಿಭಟನಕಾರರು ಕಿಡಿಕಾರಿದರು.

ಮೀಟರ್ ಕಿತ್ತು ಬಿಸಾಕಿ

ನಾವು ಇಷ್ಟು ನೀರು ಬಳಸುವುದೇ ಇಲ್ಲ, ಮೀಟರ್ ಅನ್ನು ಕಿತ್ತು ಬಿಸಾಕಿ. ನಮಗೆ ಮೀಟರ್ ಬೇಡ, ಸರಾಸರಿ ಬಿಲ್ ಕೊಡಿ, 3000, 4000, 5000 ರೂ. ಬಿಲ್ ಬರುತ್ತಿದೆ. ಬಡವರು ನಾವು ಹೇಗೆ ಬಿಲ್ ಕಟ್ಟುವುದು. ಜನರಿಂದ ಹೀಗೆ ವಸೂಲಿ ಮಾಡಿದರೆ ನಾವು ಬದುಕುವುದು ಹೇಗೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.

ಗ್ಯಾರಂಟಿ ಬೇಕಾಗಿಲ್ಲ

ಒಂದು ಕೈಯಲ್ಲಿ ಗ್ಯಾರಂಟಿ ಹಣ ನೀಡುವ ಕಾಂಗ್ರೆಸ್ ಸರ್ಕಾರ ಅದಕ್ಕಿಂತ ದುಪ್ಪಟ್ಟು ಹಣವನ್ನು ನಮ್ಮಿಂದ ಪೀಕುತ್ತಿದೆ ಎಂದು ಮಹಿಳೆಯರು ದೂರಿದರು. ನಾವೇನು ಗ್ಯಾರಂಟಿ ಕೊಡಿ ಎಂದು ಕೇಳಿದ್ವೆ, ಅಕ್ಕಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಲಾಗಿದೆ. ಇದೀಗ ನಮ್ಮಿಂದ ಹೆಚ್ಚಿನ ನೀರಿನ ಶುಲ್ಕ ಸಂಗ್ರಹಿಸುತ್ತಿದ್ದಾರೆ. ಎರಡ್ಮೂರು ಪಟ್ಟು ವಾಟರ್ ಬಿಲ್ ಬಂದಿದೆ. ನಾವು ಯಾವ್ದೇ ಕಾರಣಕ್ಕೆ ಬಿಲ್ ಕಟ್ಟಲ್ಲ ಎಂದು ಪಟ್ಟು ಹಿಡಿದ ಮಹಿಳೆಯರು ಜಲಮಂಡಳಿ, ನಗರಸಭೆ ಹಾಗೂ ಸರ್ಕಾರಕ್ಕೆ ಹಿಡಿಶಾಪ ಹಾಕಿದರು.

ಸೆಪ್ಟೆಂಬರ್‌ನಿಂದ ಮೀಟರ್ ರೀಡಿಂಗ್‌ನಂತೆ ಬಿಲ್ ನೀಡಲಾಗುತ್ತಿದೆ. ಹಿಂದೆ ಎಷ್ಟೇ ನೀರು ಬಳಸಿದರು ರೂ.218 ಸರಾಸರಿ ಬಿಲ್ ಕಟ್ಟುತ್ತಿದ್ದ ಜನರಿಗೆ ಏಕಾಏಕಿ ಮೀಟರ್ ರೀಡಿಂಗ್‌ನಂತೆ ಬಂದ ನೀರಿನ ಬಿಲ್ ನೋಡಿ ಶಾಕ್ ಆಗಿದೆ. ಅಲ್ಲದೇ ಕಡುಬಡವರು ಇಷ್ಟೊಂದು ನೀರಿನ ಶುಲ್ಕ ಹೇಗೆ ಪಾವತಿಸಬೇಕು. ನಗರಸಭೆ ಅವೈಜ್ಞಾನಿಕ ದರ ನಿಗದಿಪಡಿಸಿದ್ದು ಹಿಂದಿನಂತೆ ವ್ಯವಸ್ಥೆ ಜಾರಿ ಮಾಡಬೇಕು ಎಂದು ಆಗ್ರಹಿಸಿದ ಸಾರ್ವಜನಿಕರು ಜಲಮಂಡಳಿ ಹಾಗೂ ನಗರಸಭೆ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ:

ಪೊಲೀಸರ ಮಧ್ಯಸ್ಥಿಕೆಯಲ್ಲಿ ಜಲಮಂಡಳಿ ಸಿಬ್ಬಂದಿಗಳು ನೀರು ಬಿಡುವ ವೇಳೆ ಮೀಟರ್ ಪರಿಶೀಲಿಸುವುದಾಗಿ ಹೇಳಿ ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿದರು.

ಪ್ರತಿಭಟನೆಯಲ್ಲಿ 6ನೇ ವಾರ್ಡ್‌ನ ನಿವಾಸಿಗಳಾದ ಶ್ಯಾಮ್, ಗಿರಿಜಮ್ಮ, ಅನಿತಾ, ನರಸುಬಾಯಿ, ಮಹದೇವರಾವ್, ಚೇತನ್, ಅನಿತ, ಸುಷ್ಮಾ, ಪದ್ಮಾವತಿ, ಅರ್ಚನಾಬಾಯಿ, ಸುಮ, ಕಾಮಾಕ್ಷಮ್ಮ, ರಾಧ, ಶ್ಯಾಮಲ, ಸುಮ, ಪಾರ್ವತಮ್ಮ, ಶಂಕರ್, ಮಹೇಶ್, ಅನಂತರಾಮು, ನರಸಿಂಹಮೂರ್ತಿ, ಭವಾನಿ, ಮಮತ, ಸತೀಶ್, ಮಹದೇವಮ್ಮ, ರಮೇಶ್, ಕೆಂಪರಾಜು, ರಾಮು, ಚಂದ್ರಬಾಯಿ, ನಿರ್ಮಲಾ, ಚಂಪಕ, ರಾಘವೇಂದ್ರ ಮುಂತಾದವರಿದ್ದರು.

Must Read