November 24, 2026
Tuesday, November 24, 2026
spot_img

ನೌಕಾನೆಲೆಯಲ್ಲೇ ಬೇಹುಗಾರಿಕೆ ಶಂಕೆ: 90 ರಹಸ್ಯ ವಿಡಿಯೋ, ಪಾಕ್ ಏಜೆಂಟ್‌ಗಳ ಜೊತೆ ಗ್ರೂಪ್ ಕಾಲ್; ಯುವಕ ಅರೆಸ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮುಂಬೈನ ಪ್ರಮುಖ ನೌಕಾನೆಲೆಯ ಭದ್ರತೆಯನ್ನೇ ಪ್ರಶ್ನಿಸುವಂತಹ ಬೇಹುಗಾರಿಕೆ ಪ್ರಕರಣ ಬೆಳಕಿಗೆ ಬಂದಿದೆ. ದೇಶದ ರಕ್ಷಣಾ ವ್ಯವಸ್ಥೆಗೆ ಸಂಬಂಧಿಸಿದ ಅತ್ಯಂತ ಸೂಕ್ಷ್ಮ ಮಾಹಿತಿಗಳು ಸೋರಿಕೆಯಾಗಿರುವ ಶಂಕೆ ವ್ಯಕ್ತವಾಗಿದ್ದು, ನೌಕಾನೆಲೆಯಲ್ಲಿ ತರಬೇತಿ ಪಡೆಯುತ್ತಿದ್ದ 21 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಈತ ನೌಕಾನೆಲೆಯೊಳಗಿನ ಸುಮಾರು 90 ರಹಸ್ಯ ವಿಡಿಯೋಗಳನ್ನು ಚಿತ್ರೀಕರಿಸಿದ್ದಲ್ಲದೆ, ಪಾಕಿಸ್ತಾನದ ಗುಪ್ತಚರ ಏಜೆಂಟ್‌ಗಳೆಂದು ಶಂಕಿಸಲಾದ ವ್ಯಕ್ತಿಗಳೊಂದಿಗೆ ಗ್ರೂಪ್ ಕಾಲ್‌ಗಳಲ್ಲೂ ಭಾಗವಹಿಸಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

90 ರಹಸ್ಯ ವಿಡಿಯೋ ಚಿತ್ರೀಕರಣ

ಬಂಧಿತನನ್ನು ಬಂಟಿ ರಾಮಪ್ರಕಾಶ್ ಮೀನಾ ಎಂದು ಗುರುತಿಸಲಾಗಿದೆ. ಮುಂಬೈನ ಕೊಲಾಬಾ ಪ್ರದೇಶದ ಬಧ್ವಾರ್ ಪಾರ್ಕ್ ನಿವಾಸಿಯಾಗಿರುವ ಈತ ನೌಕಾ ಡಾಕ್‌ಯಾರ್ಡ್‌ನಲ್ಲಿ ಅಪ್ರೆಂಟಿಸ್ ಆಗಿ ಕೆಲಸ ಮಾಡುತ್ತಿದ್ದ. ನೌಕಾ ಹಡಗುಗಳ ದುರಸ್ತಿ ಮತ್ತು ನಿರ್ಮಾಣ ಕಾರ್ಯ ನಡೆಯುವ ಈ ಪ್ರಮುಖ ಕೇಂದ್ರದೊಳಗಿನ ಸೂಕ್ಷ್ಮ ಪ್ರದೇಶಗಳನ್ನು ಈತ ವಿಡಿಯೋ ಮಾಡಿದ್ದಾನೆ ಎಂದು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ರಿಮಾಂಡ್ ಅರ್ಜಿಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:

ಇನ್‌ಸ್ಟಾಗ್ರಾಂ ಮೂಲಕ ಸಂಪರ್ಕ

ಪೊಲೀಸರ ಪ್ರಕಾರ, ‘nattuu3’ ಎಂಬ ಇನ್‌ಸ್ಟಾಗ್ರಾಂ ಖಾತೆ ಹಾಗೂ ಪಾಕಿಸ್ತಾನದ ಗುಪ್ತಚರ ಸಂಸ್ಥೆಗಳೊಂದಿಗೆ ಸಂಪರ್ಕ ಹೊಂದಿರಬಹುದು ಎಂದು ಶಂಕಿಸಲಾಗಿರುವ ವಾಟ್ಸ್‌ಆ್ಯಪ್ ಸಂಖ್ಯೆಯ ಮೂಲಕ ಆರೋಪಿಗೆ ಕೆಲವರ ಪರಿಚಯವಾಗಿತ್ತು. ಬಳಿಕ ಅವರೊಂದಿಗೆ ಗ್ರೂಪ್ ಕಾಲ್‌ಗಳಲ್ಲಿ ಭಾಗವಹಿಸಿದ್ದಾನೆ ಎನ್ನಲಾಗಿದೆ.

ನೌಕಾನೆಲೆಗೆ ಆಗಮಿಸುವ ಯುದ್ಧನೌಕೆಗಳ ವಿವರಗಳನ್ನು ಪಡೆಯಲು ಕೆಲವರು ಹಡಗು ನಿರ್ವಹಣಾ ಕಂಪನಿಗಳ ಉದ್ಯೋಗಿಗಳಂತೆ ನಟಿಸಿರಬಹುದು ಎಂಬ ಅನುಮಾನವೂ ಪೊಲೀಸರಿಗಿದೆ.

ಹಣಕಾಸು ವಹಿವಾಟಿನ ಬಗ್ಗೆಯೂ ತನಿಖೆ

ಕಳೆದ ವಾರ ಬಂಧನಕ್ಕೊಳಗಾದ ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS), ಅಧಿಕೃತ ರಹಸ್ಯಗಳ ಕಾಯ್ದೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಸೋಮವಾರ ಆತನ ಪೊಲೀಸ್ ಕಸ್ಟಡಿಯನ್ನು ವಿಸ್ತರಿಸುವಂತೆ ಪೊಲೀಸರು ಸ್ಥಳೀಯ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ಪ್ರಕರಣದಲ್ಲಿ ಇತರರು ಭಾಗಿಯಾಗಿದ್ದಾರೆಯೇ, ಆರೋಪಿಯೊಂದಿಗೆ ಸಂಪರ್ಕದಲ್ಲಿದ್ದ ವ್ಯಕ್ತಿಗಳು ಯಾರು, ಯಾವುದೇ ಹಣಕಾಸಿನ ವಹಿವಾಟು ನಡೆದಿದೆಯೇ ಎಂಬ ಆಯಾಮಗಳಲ್ಲೂ ತನಿಖೆ ಮುಂದುವರಿದಿದೆ. ಗ್ರೂಪ್ ಕಾಲ್‌ಗಳಲ್ಲಿ ಭಾಗವಹಿಸಿದ್ದ ಇತರ ವ್ಯಕ್ತಿಗಳ ಗುರುತು ಪತ್ತೆಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

Must Read

Skip to toolbar