ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕಲಾವಿದರ ಸಂಘದಲ್ಲಿ ಸ್ಯಾಂಡಲ್‌ವುಡ್ ಏಳಿಗೆಗಾಗಿ ಇಂದು ವಿಶೇಷ ಪೂಜೆ ನಡೆಡಿದ್ದು, ಈ ವೇಳೆ ನಾಗಾರಾಧನೆ ಸಮಯ ಹಿರಿಯ ನಟಿ ಜ್ಯೋತಿ ಭಾವೋದ್ವೇಗಕ್ಕೆ ಒಳಗಾಗಿರುವ ಘಟನೆ ನಡೆದಿದೆ.
ನಾಗಾರಾಧನೆ ನಡೆಯುತ್ತಿದ್ದ ವೇಳೆ, ನಟಿ ಜ್ಯೋತಿ ಭಾವೋದ್ವೇಗಕ್ಕೆ ಒಳಗಾಗಿದ್ದಾರೆ. ಕೂಡಲೇ ಅವರಿಗೆ ಕುಡಿಯಲು ನೀರು ಕೊಟ್ಟು ಸಮಾಧಾನಪಡಿಸಿದ್ದಾರೆ. ಈ ಘಟನೆ ನೋಡಿ ಎಲ್ಲರೂ ಅಚ್ಚರಿಪಟ್ಟಿದ್ದಾರೆ.
ಈ ಕುತೂಹಲದ ಬಗ್ಗೆ ಖುದ್ದು ನಟಿ ಜ್ಯೋತಿ ಅವರು ಪ್ರತಿಕ್ರಿಯಿಸಿದ್ದಾರೆ.
ಮೈಮೇಲೆ ದೇವರು ಬಂದಾಗ ಏನಾಯ್ತು?
ನನಗೆ ಈ ಹಿಂದೆಯೂ ನಾಗದೇವರು ಮೈಮೇಲೆ ಬಂದ ಅನುಭವ ಆಗಿತ್ತು. ದೊಡ್ಡ, ದೊಡ್ಡ ಪೂಜೆ, ಪುನಸ್ಕಾರ ಮಾಡೋ ಸಂದರ್ಭದಲ್ಲಿ ದೇವಿ ಆರಾಧನೆ ಮಾಡೋವಾಗ ನನ್ನ ಮೈಯಲ್ಲಿ ವೈಬ್ರೇಷನ್ ಆಗುತ್ತೆ. ನನ್ನ ಮೇಲೆ ದೇವಿಯ ಅನುಗ್ರಹ ಇದೆ ಅನ್ನೋದನ್ನ ತೋರಿಸಿಕೊಳ್ಳಲು ಈ ರೀತಿಯಾದ ಘಟನೆ ನಡೆಯುತ್ತೆ.
ನಾಗಾರಾಧನೆಯ ಸಮಯದಲ್ಲೂ ನನಗೆ ದೇವರು ಸ್ವಲ್ಪ ಮೈಮೇಲೆ ಬರುತ್ತೆ. ಇವತ್ತೂ ಸಹ ಕಲಾವಿದರ ಸಂಘದಲ್ಲಿ ನಾನಿದ್ದೀನಿ ಅಂತ ತೋರಿಸಿಕೊಳ್ಳಲು ದೇವರು ನನ್ನ ಮೈಮೇಲೆ ಬಂತು. ದೇವರು ಇಲ್ಲಿದ್ದಾರೆ. ಈ ಪೂಜೆಯನ್ನು ಸ್ವೀಕರಿಸಿದ್ದಾರೆ. ನಮ್ಮ ಇಂಡಸ್ಟ್ರಿಗೆ ಒಳ್ಳೆಯದುಗುತ್ತೆ. ಮುಂದೆ ಯಶಸ್ಸು ಸಿಗಲಿದೆ ಎಂದು ಜ್ಯೋತಿ ಹೇಳಿದ್ದಾರೆ.
ದೇವರು ಮೈಮೇಲೆ ಬಂದಾಗ ಸ್ವಲ್ಪ ನಿಮಿಷಗಳ ಕಾಲ ನನಗೇನು ಗೊತ್ತಾಗಲ್ಲ. ಸಡನ್ ಆಗಿ ನನ್ನ ಮೈಮೇಲೆ ಶಕ್ತಿ ಹೆಚ್ಚಾಗುತ್ತೆ. ನಾಲ್ಕೈದು ಜನ ಹಿಡಿದುಕೊಳ್ಳೋದು ಕಷ್ಟವಾಗುತ್ತೆ. ಆಗ ನನಗೆ ಏನಾಗುತ್ತೆ ಅನ್ನೋದು ಗೊತ್ತಾಗಲ್ಲ. ದೇವರ ಅನುಗ್ರಹ ಇರೋದ್ರಿಂದ ಮೈಮೇಲೆ ಬರುತ್ತೆ ಅಂತ ಹೇಳಿದ್ದಾರೆ. ಹೀಗಾಗಿ ನಾನು ಅದನ್ನ ನಂಬಿದ್ದೇನೆ ಎಂದು ತಿಳಿಸಿದ್ದಾರೆ.
ಅಂದಹಾಗೆ, ರಾಕ್‌ಲೈನ್ ವೆಂಕಟೇಶ್ ನೇತೃತ್ವದಲ್ಲಿ ಈ ಪೂಜೆ ನಡೆಯುತ್ತಿದ್ದು, ಹಿರಿಯ ನಟಿ ಗಿರಿಜಾ ಲೋಕೇಶ್, ಜಗ್ಗೇಶ್, ಶರಣ್, ಲವ್ಲಿ ಸ್ಟಾರ್ ಪ್ರೇಮ್, ನಟಿ ರಾಗಿಣಿ ದ್ವಿವೇದಿ, ಅಭಿಷೇಕ್ ಅಂಬರೀಶ್, ಗುರುಕಿರಣ್, ಪದ್ಮಜಾ ರಾವ್ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ.