ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಂಜಾಬ್ ನಲ್ಲೀಗ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳ ನಡುವಿನ ಗುದ್ದಾಟ ಶುರುವಾಗಿದ್ದು, ಇಬ್ಬರ ನಡುವೆ ಒಂದಲ್ಲ ಒಂದು ವಿಷಯಕ್ಕೆ ಒಳಜಗಳ ಉಂಟಾಗುತ್ತಿದೆ.
ಇದೀಗ ಮುಖ್ಯಮಂತ್ರಿ ಭಗವಂತ್ ಮಾನ್ ವಿರುದ್ಧ ಕಿಡಿಕಾರಿದ ಪಂಜಾಬ್ ಗವರ್ನರ್ ಬನ್ವಾರಿ ಲಾಲ್ ಪುರೋಹಿತ್ (Banwari Lal Purohit) , ಮತ್ತೆ ತಮ್ಮ ವಿರುದ್ಧ ಕೆಟ್ಟಾಗಿ ಮಾತನಾಡಿದ್ದಾರೆ. ಈ ವಿಚಾರವಾಗಿ ಸಿಎಂ ವಿರುದ್ಧ ದೂರು ನೀಡುವೇ ಎಂದು ಹೇಳಿದ್ದಾರೆ.
ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ರಾಜ್ಯಪಾಲರು, ಸಿಎಂ ಭಗವಂತ್ ಮಾನ್ ಅವರ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಜೂನ್‌ನಲ್ಲಿ ವಿಧಾನಸಭೆ ಅಧಿವೇಶನ ಕರೆದಾಗಿನಿಂದ ಭಗವಂತ್ ಮಾನ್ ಅವರು ತಮ್ಮ ವರ್ಚಸ್ಸು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
ವಿಧಾನಸೌಧದ ಕಲಾಪದ ವೇಳೆ ಎಲ್ಲರ ಸಮ್ಮುಖದಲ್ಲಿ ಮುಖ್ಯಮಂತ್ರಿಗಳು ತಮ್ಮ ವಿರುದ್ಧ ತಪ್ಪು ಪದಗಳನ್ನು ಬಳಸಿದ್ದಾರೆ ಎಂದು ರಾಜ್ಯಪಾಲರು ಆರೋಪಿಸಿದ್ದಾರೆ. ಮುಖ್ಯಮಂತ್ರಿಗಳು ಸದನದಲ್ಲಿ ಮಾತನಾಡುವಾಗ ರಾಜ್ಯಪಾಲರು ಪತ್ರ ಬರೆಯುತ್ತಲೇ ಇರುತ್ತಾರೆ, ಸೋಮಾರಿ ಎಂಬಿತ್ಯಾದಿ ಪದಗಳನ್ನು ಬಳಸಲಾಗಿದೆ. ಒಬ್ಬ ಮುಖ್ಯಮಂತ್ರಿ ಇಂತಹ ಭಾಷೆ ಬಳಸಬಾರದು ಎಂದು ಹೇಳಿದ್ದಾರೆ.
ಸದನದಲ್ಲಿ ಕಾನೂನು ರಕ್ಷಣೆ ಇರುವುದರಿಂದ ಮುಖ್ಯಮಂತ್ರಿಗೆ ರಕ್ಷಣೆ ನೀಡಲಾಗಿದೆ. ಸದನದ ಹೊರಗೆ ಇದೇ ಆರೋಪ ಮಾಡಿದ್ದರೆ ಇಷ್ಟೊತ್ತಿಗೆ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹಾಕುತ್ತಿದ್ದೆ. ಸಿಎಂ ಮಾನಹಾನಿ ಮಾಡುತ್ತಿದ್ದಾರೆ ಎಂದು ರಾಜ್ಯಪಾಲ ಬನ್ವಾರಿ ಲಾಲ್ ಪುರೋಹಿತ್ ಆರೋಪಿಸಿದ್ದಾರೆ.
ರಾಜ್ಯಪಾಲರ ಮೇಲೆ ಒತ್ತಡ ಹೇರಿಕೆ ಅಥವಾ ಬೆದರಿಕೆ ಆರೋಪದ ಮೇಲೆ ಮುಖ್ಯಮಂತ್ರಿ ಭಗವನ್ ಮಾನ್ ವಿರುದ್ಧವೂ ಕಾನೂನು ಕ್ರಮ ಜರುಗಿಸಬಹುದು. ಮುಖ್ಯಮಂತ್ರಿ ಅವರ ತಮ್ಮ ಭಾಷೆಯ ಬಗ್ಗೆ ನಿಗಾವಹಿಸಬೇಕು ಮತ್ತು ಕಾರಣವಿಲ್ಲದೆ ನಿಂದನೆ ಮಾಡಬಾರದು. ರಾಜ್ಯಪಾಲರಿಗೆ ಹಲವು ಅಧಿಕಾರಗಳಿವೆ. ನಾನು ಬೇಕಾದರೆ ಮುಖ್ಯಮಂತ್ರಿಗಳ ಪ್ರತಿ ತಪ್ಪು ಹೇಳಿಕೆಗೆ ನಾನು ಪ್ರತಿಕ್ರಿಯಿಸಬಹುದು, ಆದರೆ ನಾನು ಹಾಗೆ ಮಾಡುವುದಿಲ್ಲ ಎಂದು ರಾಜ್ಯಪಾಲ ಬನ್ವಾರಿ ಲಾಲ್ ಪುರೋಹಿತ್ ಹೇಳಿದ್ದಾರೆ.