ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರೀಯ ತನಿಖಾ ದಲದ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದ, ಖಾಲಿಸ್ಥಾನಿ ಉಗ್ರ ಹರ್ವೀಂದರ್ ಸಿಂಗ್ ರಿಂಡಾ ಪಾಕಿಸ್ತಾನದಲ್ಲಿ ಸಾವನ್ನಪ್ಪಿರುವುದಾಗಿ ಮೂಲಗಳು ವರದಿ ಮಾಡಿವೆ.
ಕೆಲ ವರದಿಗಳ ಪ್ರಕಾರ ರಿಂಡಾ ಪಾಕಿಸ್ತಾನದ ಲಾಹೋರ್‌ನ ಆಸ್ಪತ್ರೆಯಲ್ಲಿಸಾವನ್ನಪ್ಪಿದ್ದಾನೆ. ಪಂಜಾಬ್‌ನಲ್ಲಿ ಕನಿಷ್ಠ ಹತ್ತು ಭಯೋತ್ಪಾದನೆ ಪ್ರಕರಣಗಳಲ್ಲಿ ಆತನ ಹೆಸರಿದೆ. ಡ್ರಗ್ಸ್ ಓವರ್ ಡೋಸ್ ನಿಂದ ಮೂತ್ರಪಿಂಡದ ಕಾಯಿಲೆಗೆ ತುತ್ತಾಗಿ ಆತ ಚಿಕಿತ್ಸೆ ಪಡೆಯುತ್ತಿದ್ದ ಎನ್ನಲಾಗಿದೆ.
ಆದರೆ ಇನ್ನೊಂದು ಮೂಲಗಳ ಪ್ರಕಾರ ಡೇವಿಂದರ್ ಭಂಬಿಹಾ ಮಾಫಿಯಾ ಗುಂಪು ತನ್ನ ಸದಸ್ಯರ ವಿರುದ್ಧ ತಿರುಗಿಬಿದ್ದ ಕಾರಣ ಆತನನ್ನು ಗುಂಡು ಹೊಡೆದು ಕೊಂದಿರುವುದಾಗಿ ಹೇಳಿದ್ದು ಆತನ ಸಾವಿನ ಹೊಣೆಗಾರಿಕೆಯನ್ನು ಹೊತ್ತುಕೊಂಡಿದೆ ಎನ್ನಲಾಗಿದೆ.
ಈ ವರ್ಷದ ಮೇ ತಿಂಗಳಲ್ಲಿ ಪಂಜಾಬ್ ಪೋಲೀಸ್ ಗುಪ್ತಚರ ಕಚೇರಿಯ ಮೇಲೆ ರಾಕೆಟ್ ದಾಳಿ, 2021ರಲ್ಲಿ ಲುಧಿಯಾನಾ ಕೋರ್ಟ್ ಸ್ಫೋಟ ಸೇರಿದಂತೆ ಹಲವು ಪ್ರಕರಣದಲ್ಲಿ ಉಗ್ರ ರಿಂಡಾ ಭಾಗಿಯಾಗಿದ್ದ ಎನ್ನಲಾಗಿದೆ. ಕೊಲೆ, ಸುಪಾರಿ ಹತ್ಯೆ, ದರೋಡೆ, ಸುಲಿಗೆ ಮತ್ತು ಇತರ ಪ್ರಕರಣಗಳಿಗೆ ಸಂಬಂಧಿಸಿದ ಕನಿಷ್ಠ 24 ಅಪರಾಧಗಳಲ್ಲಿ ರಿಂಡಾ ಪಂಜಾಬ್ ಪೊಲೀಸರಿಗೆ ಬೇಕಾಗಿದ್ದ. ರಿಂಡಾ ಬಗ್ಗೆ ಮಾಹಿತಿ ನೀಡಿದವರಿಗೆ 10 ಲಕ್ಷ ರೂಪಾಯಿ ನಗದು ಬಹುಮಾನವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಘೋಷಿಸಿತ್ತು. ಇಂಟರ್ ಪೋಲ್ ಕೂಡ ಆತನ ವಿರುದ್ಧ ರೆಡ್ ನೋಟಿಸ್ ಜಾರಿ ಮಾಡಿತ್ತು.
ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್ ಎಂಬ ಖಾಲಿಸ್ತಾನಿ ಭಯೋತ್ಪಾದಕ ಸಂಘಟನೆಗೆ ಸೇರಿದ್ದ ಈತ ಕಳೆದ ಕೆಲ ವರ್ಷಗಳಿಂದ ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿದ್ದ. ಅಲ್ಲಿ ಪಾಕಿಸ್ತಾನಿ ಉಗ್ರ ಗುಂಪುಗಳು ಮತ್ತು ಇತರ ದೇಶಗಳಲ್ಲಿರುವ ಗ್ಯಾಂಗ್ ಸ್ಟರ್ ಗಳೊಂದಿಗೆ ಸಂಪರ್ಕ ಕೊಂಡಿಯಂತೆ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ ಅಲ್ಲದೇ ಭಾರತ ಪಾಕಿಸ್ತಾನ ಗಡಿ ಪ್ರದೇಶಗಳಲ್ಲಿ ನಡೆಯುವ ಮಾದಕ ವಸ್ತುಗಳ ಸಾಗಣೆ, ಶಸ್ತ್ರಾಸ್ತ್ರ ಕಳ್ಳ ಸಾಗಣೆಯ ಕೃತ್ಯಗಳಲ್ಲಿ ಸಕ್ರಿಯವಾಗಿದ್ದ ಎಂದು ಮೂಲಗಳ ವರದಿ ಉಲ್ಲೇಖಿಸಿವೆ.