ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾಜಿಕ ಮಾಧ್ಯಮಗಳಲ್ಲಿ ಭಾರತದ ಪರವಾಗಿ ತೀಕ್ಷ್ಣ ಹೇಳಿಕೆಗಳು ಹಾಗೂ ಗಂಭೀರವಾದ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದ ಯೂಟ್ಯೂಬರ್ ನ್ಯಾನ್ಸಿ ಗ್ರೆವಾಲ್ ಅವರನ್ನು ಕೆನಡಾದಲ್ಲಿ ಹತ್ಯೆ ಮಾಡಲಾಗಿದೆ.
ಮಂಗಳವಾರ ರಾತ್ರಿ ನ್ಯಾನ್ಸಿ ಅವರ ಮೇಲೆ ಹಲ್ಲೆ ನಡೆಸಲಾಗಿದ್ದು, ತೀವ್ರ ಗಾಯಗೊಂಡ ಅವರನ್ನು ಅಲ್ಲಿನ ಎಸೆಕ್ಸ್ ವಿಂಡ್ಸರ್ ತುರ್ತು ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಯ ವೇಳೆ ಅವರು ನಿಧನರಾಗಿದ್ದಾರೆ ಎಂದು ಕೆನಡಾದ ಅಧಿಕಾರಿಗಳು ತಿಳಿಸಿದ್ದಾರೆ.
ನ್ಯಾನ್ಸಿ ಗ್ರೆವಾಲ್ ಅವರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ತೀಕ್ಷ್ಣ ಹೇಳಿಕೆ, ಪೋಸ್ಟ್ಗಳಿಂದ ಹೆಸರುವಾಸಿಯಾಗಿದ್ದರು.
ಕೆನಡಾದ ಸ್ಥಳೀಯ ಮಾಧ್ಯಮಗಳಲ್ಲಿ ವರದಿ ಅಗಿರುವಂತೆ ಯೂಟ್ಯೂಬರ್ ಆಗಿದ್ದ ನ್ಯಾನ್ಸಿ ಗ್ರೆವಾಲ್ ಅವರ ಮೇಲೆ ಮಂಗಳವಾರ ರಾತ್ರಿ ಮಾರಣಾಂತಿಕ ಹಲ್ಲೆ ನಡೆದಿದೆ. ಈವರೆಗೂ ಯಾವುದೇ ಶಂಕಿತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆಯೇ? ಇಲ್ಲವೇ ಎಂಬುದನ್ನು ಪೊಲೀಸರು ಇನ್ನೂ ದೃಢಪಡಿಸಿಲ್ಲ.
ನ್ಯಾನ್ಸಿ ಗ್ರೆವಾಲ್ 6 ದಿನಗಳ ಹಿಂದೆ (ಫೆಬ್ರವರಿ 28) ತಮ್ಮ ಫೇಸ್ ಬುಕ್ನಲ್ಲಿ ವಿವಾದಾತ್ಮಕ ವಿಡಿಯೋವೊಂದನ್ನು ಅಪ್‌ಲೋಡ್ ಮಾಡಿದ್ದರು. ಅದರಲ್ಲಿ ಅವರು ಶ್ರೀಅಕಲ್ ತಖ್ತ್ ಜಥೇದಾರ್ ಕುಲದೀಪ್ ಸಿಂಗ್ ಗರ್ಗಜ್ ಬಗ್ಗೆ ಅಸಭ್ಯ ಭಾಷೆಯನ್ನು ಬಳಸಿದ್ದಾರೆ ಎಂದು ಹೇಳಲಾಗಿದೆ. ಇದರ ನಂತರ, ಯಾವುದೇ ವಿಡಿಯೋವನ್ನು ಅವರು ಅಪ್‌ಲೋಡ್ ಮಾಡಿಲ್ಲ.



