October 16, 2026
Friday, October 16, 2026
spot_img

ಇರಾನ್ ಬೆನ್ನಿಗೆ ನಿಂತ ಯೆಮನ್ ಬಂಡುಕೋರರು: ಮಧ್ಯಪ್ರಾಚ್ಯದಲ್ಲಿ ಹೆಚ್ಚಿದ ಮಹಾಯುದ್ಧದ ಭೀತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಆರಂಭವಾಗಿ ತಿಂಗಳು ಕಳೆಯುತ್ತಾ ಬಂದಿದ್ದು, ಈಗ ಈ ಸಂಘರ್ಷಕ್ಕೆ ಯೆಮನ್ ಕೂಡ ಅಧಿಕೃತವಾಗಿ ಧುಮುಕಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಯೆಮನ್‌ನಿಂದ ಇಸ್ರೇಲ್ ಮೇಲೆ ನೇರ ಕ್ಷಿಪಣಿ ದಾಳಿ ನಡೆದಿದ್ದು, ಮಧ್ಯಪ್ರಾಚ್ಯದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.

ಯೆಮನ್ ಕಡೆಯಿಂದ ಬಂದ ಕ್ಷಿಪಣಿಯನ್ನು ಇಸ್ರೇಲ್ ಸೇನೆ ಯಶಸ್ವಿಯಾಗಿ ತಡೆದು ಹೊಡೆದುರುಳಿಸಿದೆ. “ಯೆಮನ್ ಕ್ಷಿಪಣಿಯನ್ನು ನಾವು ನಾಶಪಡಿಸಿದ್ದೇವೆ, ನಮ್ಮ ಕಡೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ” ಎಂದು ಇಸ್ರೇಲ್ ಸೇನೆ ಸ್ಪಷ್ಟಪಡಿಸಿದೆ.

ಇರಾನ್ ಬೆಂಬಲಿತ ಯೆಮನ್‌ನ ಹೌತಿ ಬಂಡುಕೋರರು ಈಗಾಗಲೇ ಇಸ್ರೇಲ್ ಮತ್ತು ಅಮೆರಿಕಕ್ಕೆ ಖಡಕ್ ವಾರ್ನಿಂಗ್ ನೀಡಿದ್ದರು. “ನಮ್ಮ ಬೆರಳುಗಳು ಈಗಲೂ ಗನ್ ಟ್ರಿಗರ್ ಮೇಲೆಯೇ ಇವೆ” ಎಂದು ಗುಡುಗಿದ್ದ ಹೌತಿ ಕಮಾಂಡರ್, ಇಸ್ರೇಲ್ ಪರ ನಿಲ್ಲುವ ರಾಷ್ಟ್ರಗಳ ವಿರುದ್ಧ ಆಕ್ರೋಶ ಹೊರಹಾಕಿದ್ದರು.

ಕೆಂಪು ಸಮುದ್ರದಲ್ಲಿ ಇಸ್ರೇಲ್ ಅಥವಾ ಅಮೆರಿಕ ಪಡೆಗಳು ಯಾವುದೇ ಹಸ್ತಕ್ಷೇಪ ನಡೆಸಿದರೆ ಅಥವಾ ಇರಾನ್ ಮೇಲೆ ದಾಳಿಗೆ ಮುಂದಾದರೆ ತಕ್ಕ ಶಾಸ್ತಿ ಮಾಡುವುದಾಗಿ ಹೌತಿಗಳು ಎಚ್ಚರಿಸಿದ್ದಾರೆ. ಇರಾನ್ ಬೆಂಬಲ ಹೊಂದಿರುವ ಯೆಮನ್‌ನ ಈ ಶಿಯಾ ಬಂಡುಕೋರ ಸಂಘಟನೆಯ ಎಂಟ್ರಿ ಈಗ ಜಾಗತಿಕ ಮಟ್ಟದಲ್ಲಿ ಆತಂಕ ಮೂಡಿಸಿದೆ.

Must Read