ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕಂಗನಾ ರಣಾವತ್ ಅವರ ‘ಎಮರ್ಜೆನ್ಸಿ’ ತೆರೆಕಂಡಿದೆ. ಈ ಸಿನಿಮಾದಲ್ಲಿ ಕಂಗನಾ ರಣಾವತ್ ಅವರು ಇಂದಿರಾ ಗಾಂಧಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಆದರೆ ಕೆಲವು ಕಡೆಗಳಲ್ಲಿ ‘ಎಮರ್ಜೆನ್ಸಿ’ ಚಿತ್ರಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಪಂಜಾಬ್ನಲ್ಲಿ ಈ ಸಿನಿಮಾವನ್ನು ನಿಷೇಧ ಮಾಡಬೇಕು ಎಂದು ಒತ್ತಾಯಿಸಲಾಗುತ್ತಿದೆ.
ಸಿಖ್ ಸಮುದಾಯದವರು ‘ಎಮರ್ಜೆನ್ಸಿ’ ಸಿನಿಮಾವನ್ನು ತೀವ್ರವಾಗಿ ವಿರೋಧಿಸಿದ್ದಾರೆ. ‘ಶಿರೋಮಣಿ ಗುರುದ್ವಾರ ಪ್ರತಿಬಂಧಕ ಸಮಿತಿ’ ಈ ಚಿತ್ರದ ಬಗ್ಗೆ ತಕರಾರು ತೆಗೆದಿದೆ. ಈ ಸಿನಿಮಾದಲ್ಲಿ ಸಿಖ್ ಸಮುದಾಯಕ್ಕೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂದು ಒತ್ತಾಯಿಸಿ ಅಮೃತಸರದಲ್ಲಿ ಪ್ರತಿಭಟನೆ ಮಾಡಲಾಗಿದೆ.
‘ಎಮರ್ಜೆನ್ಸಿ’ ಸಿನಿಮಾ ಪ್ರದರ್ಶನ ಆಗುತ್ತಿದ್ದ ಚಿತ್ರಮಂದಿರದ ಎದುರು ಪೊಲೀಸರನ್ನು ನಿಯೋಜಿಸಲಾಗಿದೆ. ಟ್ರೇಲರ್ ಬಿಡುಗಡೆ ಆದಾಗಲೂ ಕೂಡ ಸಿಖ್ ಸಮುದಾಯದವರು ಈ ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಸಿಖ್ಖರಿಗೆ ಸಂಬಂಧಿಸಿದ ಇತಿಹಾಸದ ವಿವರಗಳನ್ನು ‘ಎಮರ್ಜೆನ್ಸಿ’ ಸಿನಿಮಾದಲ್ಲಿ ತಿರುಚಲಾಗಿದೆ ಎಂದು ಹಲವರು ಆರೋಪಿಸಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಕಂಗನಾ ರಣಾವತ್ ಅವರು ಪ್ರತಿಕ್ರಿಯಿಸಿದ್ದಾರೆ. ‘ಇದು ಕಲೆ ಮತ್ತು ಕಲಾವಿದರ ಮೇಲೆ ಆಗುತ್ತಿರುವ ಕಿರುಕುಳ. ಪಂಜಾಬ್ನ ಅನೇಕ ನಗರಗಳಲ್ಲಿ ಎಮರ್ಜೆನ್ಸಿ ಸಿನಿಮಾದ ಪ್ರದರ್ಶನಕ್ಕೆ ಅಡ್ಡಿ ಮಾಡಲಾಗುತ್ತಿದೆ. ನನಗೆ ಎಲ್ಲ ಧರ್ಮದ ಬಗ್ಗೆ ಗೌರವ ಇದೆ. ಚಂಡೀಗಡದಲ್ಲಿ ಓದಿ, ಬೆಳೆದ ನಾನು ಸಿಖ್ ಧರ್ಮವನ್ನು ಹತ್ತಿರದಿಂದ ನೋಡಿದ್ದೇನೆ, ಅನುಸರಿಸಿದ್ದೇನೆ. ಸಿನಿಮಾದಲ್ಲಿ ಸಿಖ್ ಧರ್ಮಕ್ಕೆ ಅವಮಾನ ಆಗಿದೆ ಎಂಬುದು ಶುದ್ಧ ಸುಳ್ಳು. ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ತರಬೇಕು ಹಾಗೂ ಸಿನಿಮಾಗೆ ಹಾನಿ ಮಾಡಬೇಕು ಎಂಬ ಪ್ರಯತ್ನವಷ್ಟೇ’ ಎಂದು ಕಂಗನಾ ರಣಾವತ್ ಟ್ವೀಟ್ ಮಾಡಿದ್ದಾರೆ.