ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೈಯಪ್ಪನಹಳ್ಳಿ – ಕೆ.ಆರ್.ಪುರಂ ಮತ್ತು ಚಲಘಟ್ಟ – ಕೆಂಗೇರಿ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಸೇವೆಗೆ ಮುಕ್ತವಾಗಿದೆ. ಸರ್ಕಾರದ ಯಾವುದೇ ಔಪಚಾರಿಕ ಹಾಗೂ ಅನೌಪಚಾರಿಕ ಕಾರ್ಯಕ್ರಮಗಳಿಗೆ ಕಾಯದೇ ಅಕ್ಟೋಬರ್ 9 ರಿಂದ ಮೆಟ್ರೋ ಸಂಚಾರ ಆರಂಭಿಸಲು ಕೇಂದ್ರ ಸೂಚನೆ ನೀಡಿದೆ ಬೆನ್ನಲ್ಲೇ ಇಂದು ಬೆಳಗ್ಗೆ 5ಗಂಟೆಯಿಂದಲೇ ನಮ್ಮ ಮೆಟ್ರೋ ಸಂಚಾರ ಆರಂಭವಾಗಿದೆ.
ನಮ್ಮ ಮೆಟ್ರೋ ನೇರಳೆ ಮಾರ್ಗದ ಪೂರ್ವ-ಪಶ್ಚಿಮ ಕಾರಿಡಾರ್‌ನ ವಿಭಾಗಗಳಾದ ಬೈಯಪ್ಪನಹಳ್ಳಿ – ಕೆಆರ್ ಪುರ (2.1 ಕಿಮೀ) ಮತ್ತು ಚಲ್ಲಘಟ್ಟ – ಕೆಂಗೇರಿ (2.05 ಕಿಮೀ) ನಡುವೆ ಎರಡು ರೈಲ್ವೆ ಮಾರ್ಗಗಳಲ್ಲಿ ವಾಣಿಜ್ಯ ಸೇವೆ ಆರಂಭವಾಗಿದೆ. ಇದೀಗ ನೇರಳೆ ಮಾರ್ಗ 43.49 ಕಿ.ಮೀ.ಗೆ ವಿಸ್ತರಣೆಯಾಗಿದ್ದು, ವೈಟ್‌ಫೀಲ್ಡ್ ಉದ್ಯೋಗಿಗಳು ಹಾಗೂ ಜನರಿಗೆ ಟ್ರಾಫಿಕ್ ಕಿರಿಕಿರಿ ತಪ್ಪಿದಂತಾಗಿದೆ.
ಸೆ.25 ಮತ್ತು ಸೆ.30 ಮೆಟ್ರೋ ರೈಲು ಸುರಕ್ಷತೆ (CMRS) ಆಯುಕ್ತರಿಂದ ಸುರಕ್ಷತಾ ಪರೀಕ್ಷೆ ನಡೆಸಿದ ಬಳಿಕ ಮೇಲಿನ ಎರಡು ರೈಲ್ವೆ ಮಾರ್ಗಗಳನ್ನು ಔಪಚಾರಿಕವಾಗಿ ಪ್ರಯಾಣಿಕರ ಸೇವೆಗೆ ಮುಕ್ತಗೊಳಿಸುವುದಕ್ಕೆ ಅನುಮತಿ ನೀಡಲಾಗಿದೆ.
ಇನ್ಮುಂದೆ ಯಾವುದೇ ಸಂಚಾರ ದಟ್ಟಣೆ ಕಿರಿಕಿರಿಯಿಲ್ಲದೆ ವೈಟ್‌ಫೀಲ್ಡ್‌ಗೆ ತೆರಳುವ ಉದ್ಯೋಗಿಗಳು ಆರಾಮದಾಯ ಪ್ರಯಾಣಕ್ಕೆ ಅನುಕೂಲವಾಗಿದೆ. ವೈಟ್‌ಫೀಲ್ಡ್‌ನಿಂದ ಪ್ರತಿ ಹತ್ತು ನಿಮಿಷಕ್ಕೊಮ್ಮೆ ಮೆಟ್ರೋ ರೈಲಿನ ಸೇವೆ ಸಿಗಲಿದೆ.