ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್ನ ಮೊರ್ಬಿಯಲ್ಲಿ ಸೇತುವೆ ಕುಸಿತದ ದುರಂತ ಘಟನೆಯಲ್ಲಿ ಅಮಾಯಕ ಜೀವಗಳು ಬಲಿಯಾಗಿದ್ದಕ್ಕೆ ವಿಶ್ವದ ಪ್ರಮುಖ ನಾಯಕರು ಸಂತಾಪ ಸೂಚಿಸಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಗುಜರಾತ್ನಲ್ಲಿ ನಡೆದ ಮೊರ್ಬಿ ದುರಂತದ ಕುರಿತು ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂತಾಪ ಸೂಚಿಸಿದ ಸಂದೇಶ ಕಳಿಸಿದ್ದಾರೆ.
ಗುಜರಾತ್ ರಾಜ್ಯದಲ್ಲಿ ಸೇತುವೆ ಕುಸಿತದ ದುರಂತಕ್ಕೆ ಸಂತಾಪ ಸೂಚಿಸಿದ್ದೇನೆ. ದಯವಿಟ್ಟು ಸಂತ್ರಸ್ತರ ಕುಟುಂಬಗಳಿಗೆ ಧೈರ್ಯ ಮತ್ತು ಬೆಂಬಲದ ಮಾತುಗಳನ್ನು ತಿಳಿಸಿ, ಜೊತೆಗೆ ಈ ದುರಂತದಲ್ಲಿ ಆಸ್ಪತ್ರೆ ಪಾಲಾದ ಎಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಆಶಿಸುತ್ತೇನೆ ಎಂದು ಸಂದೇಶದಲ್ಲಿ ತಿಳಿಸಿದರು.
ನೇಪಾಳದ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಕೂಡ ಗುಜರಾತಿನಲ್ಲಿ ನಡೆದ ದುರಂತ ಘಟನೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಗುಜರಾತ್ನ ಮೊರ್ಬಿಯಲ್ಲಿ ಸೇತುವೆ ಕುಸಿತದ ದುರಂತ ಘಟನೆಯಿಂದ ನಾನು ತುಂಬಾ ದುಃಖಿತನಾಗಿದ್ದೇನೆ. ಅಮಾಯಕ ಜೀವಗಳನ್ನು ಕಳೆದುಕೊಂಡಿರುವ ಭಾರತ ಸರ್ಕಾರ ಮತ್ತು ಜನರಿಗೆ ನಾವು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತೇವೆ. ತಮ್ಮವರನ್ನು ಕಳೆದುಕೊಂಡ ಕುಟುಂಬಸ್ಥರಿಗೆ ಭಗವಂತ ದುಃಖ ಭರಿಸುವ ಶಕ್ತಿ ನೀಡಲಿ ಎಂದು ದೇವುಬಾ ಟ್ವೀಟ್ ಮಾಡಿದ್ದಾರೆ.
ಭಾರತದಲ್ಲಿನ ಬ್ರಿಟಿಷ್ ಹೈಕಮಿಷನರ್ ಅಲೆಕ್ಸ್ ಎಲ್ಲಿಸ್ ಗುಜರಾತ್ನಲ್ಲಿ ಮೊರ್ಬಿ ದುರಂತದಿಂದ ಆಘಾತವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.