ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಖಾರ್ಕಿವ್ ನಲ್ಲಿ ಭಾರತದ ವಿದ್ಯಾರ್ಥಿಗಳನ್ನು ಉಕ್ರೇನ್ ಸೇನೆ ತಮ್ಮ ರಕ್ಷಣಾಕವಚವಾಗಿಸಿ ಒತ್ತೆಯಾಳಾಗಿ ಇರಿಸಿಕೊಂಡಿದೆ ಎಂದು ರಷ್ಯ ಬುಧವಾರ ಹೇಳಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ಅಧಿಕೃತ ಪ್ರಕಟಣೆ ಹೊರಡಿಸಿದ್ದ ಭಾರತದ ವಿದೇಶ ವ್ಯವಹಾರಗಳ ಸಚಿವಾಲಯವು ಹೀಗೆ ವಿದ್ಯಾರ್ಥಿಗಳು ಒತ್ತೆಯಾಗಿರುವ ಯಾವುದೇ ಮಾಹಿತಿ ಇಲ್ಲ ಎಂದಿತ್ತು.
ಆದರೆ, ಗುರುವಾರ ರಷ್ಯನ್ ನಲ್ಲಿ ಆಡಿದ ತಮ್ಮ ಮಾತುಗಳಲ್ಲಿ ಪುಟಿನ್ ಈ ಒತ್ತೆ ಆರೋಪವನ್ನು ಪುನರುಚ್ಚರಿಸಿದ್ದಾರೆ. “ಸಾವಿರಾರು ಯುವಜನರನ್ನು, ವಿದ್ಯಾರ್ಥಿಗಳನ್ನು ಉಕ್ರೇನಿನಲ್ಲಿ ಇರುವ ಜಾಗ ತೊರೆಯದಂತೆ ದಿನಗಟ್ಟಲೇ ಇಡಲಾಗಿದೆ. ಖಾರ್ಕಿವ್ ನ ರೈಲು ನಿಲ್ದಾಣದಲ್ಲಿ 3,000 ಭಾರತೀಯ ನಾಗರಿಕರು ಈ ಸ್ಥಿತಿಯಲ್ಲಿದ್ದಾರೆ. ಸುಮಿ ನಗರದಲ್ಲಿ ಈ ರೀತಿ 576 ಮಂದಿ ಇದ್ದಾರೆ. ಖಾರ್ಕಿವ್ ನಿಂದ ಹೊರಬರಲು ಯತ್ನಿಸಿದ ಚೀನಿ ವಿದ್ಯಾರ್ಥಿಗಳ ಮೇಲೆ ಉಕ್ರೇನ್ ಪಡೆ ಗುಂಡು ಹಾರಿಸಿ ಇಬ್ಬರನ್ನು ಗಾಯಗೊಳಿಸಿದೆ. ಸಂಘರ್ಷಪ್ರದೇಶದಲ್ಲಿರುವ ಬೇರೆ ದೇಶದ ನಾಗರಿಕರಿಗೆ ಸುರಕ್ಷಿತ ಹೊರಬರುವ ಮಾರ್ಗ ಕಲ್ಪಿಸುವುದಕ್ಕೆ ರಷ್ಯ ಪ್ರಯತ್ನಿಸಿದರೂ ಉಕ್ರೇನ್ ಇದಕ್ಕೆ ಅನುವು ಮಾಡಿಕೊಡದೇ ತನ್ನ ಮಾನವ ಕವಚವನ್ನಾಗಿ ಅವರನ್ನು ಬಳಸಿಕೊಳ್ಳುತ್ತಿದೆ” ಎಂಬುದು ರಷ್ಯ ಅಧ್ಯಕ್ಷ ಪುಟಿನ್ ಮಾಡುತ್ತಿರುವ ಆರೋಪ.