ಹೊಸದಿಗಂತ ವರದಿ, ರಾಯಚೂರು :
ಗ್ರಾಮದಲ್ಲಿ ನಡೆದ ಶಂಕರಲಿಂಗೇಶ್ವರ ಜಾತ್ರೆ ಮಹೋತ್ಸವದ ಹಿನ್ನೆಲೆಯಲ್ಲಿ ಮಸ್ಕಿ ಶಾಸಕ ಬಸನಗೌಡ ತುರವಿಹಾಳ ಕುಟುಂಬದ ಸದಸ್ಯರು ಮೊಲಗಳ ಬೇಟೆಯಾಡಿ, ಮಾರಕಾಸ್ತ್ರ ಗಳನ್ನು ಹಿಡಿದು ಮುಖ್ಯರಸ್ತೆಗಳಲ್ಲಿ ಮೆರವಣಿಗೆ ಮಾಡಿರುವ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿದ್ದು,ಇದೀಗ ಶಾಸಕ ಕುಟುಂಬಕ್ಕೆ ಸಂಕಷ್ಟ ತಂದೊಡ್ಡಿದೆ.
ಸೋಮವಾರ ಜರುಗಿರುವ ಈ ಪ್ರಕರಣಕ್ಕೆ ಸಂಬoಧಿಸಿದoತೆ ಮಸ್ಕಿ ಶಾಸಕರ ಸಹೋದರ, ಪುತ್ರ ಹಾಗೂ ಸ್ಥಳೀಯ ಅನೇಕರು ಮೊಲಗಳ ಬೇಟೆ ಹಾಗೂ ಶಸ್ತ್ರಾಸ್ತ್ರಗಳೊಂದಿಗೆ ಮೆರವಣಿಗೆ ಮಾಡಿದ ಹಿನ್ನಲೆಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯಿದೆ ೧೯೭೨, ೫೧ಅಡಿ ಪ್ರಕರಣ ದಾಖಲು ಸೆಕ್ಷನ್ ೯ ಅಡಿ ಅರಣ್ಯ ಇಲಾಖೆಯ ಅಧಿಕಾರಿಗಳು ಪ್ರಕರಣವನ್ನು ದಾಖಲಿಸಿರುವರು. ಈ ಪ್ರಕರಣದಲ್ಲಿ ಶಾಸಕರ ಸಹೋದರ ಸಿದ್ದನಗೌಡ ಎ೧, ಶಾಸಕರ ಪುತ್ರ ಸತೀಶ್ ಗೌಡ ಎ೨, ಸ್ಥಳೀಯ ದುರ್ಗೇಶ ಹಾಗೂ ಇತರರ ವಿರುದ್ದ ಪ್ರಕರಣ ದಾಖಲು ಮಾಡಲಾಗಿದೆ.
ಸೋಮವಾರ ಸ್ಥಳೀಯ ಜಾತ್ರಾ ಮಹೋತ್ಸವದ ಅಂಗವಾಗಿ ಮಸ್ಕಿ ಶಾಸಕ ಬಸನಗೌಡ ತುರವಿಹಾಳ ಸಹೋದರ ಸಿದ್ದನಗೌಡ ಹಾಗೂ ಪುತ್ರ ಸತೀಶ್ ಗೌಡ ಕೊಂದ ಮೊಲಗಳನ್ನು ಕೊಂದು ಕಟ್ಟಿಗೆಗೆ ನೇತು ಹಾಕಿ ಮಾರಕಾಸ್ತ್ರ ಹಿಡಿದು ಅಪಾರ ಬೆಂಬಲಿಗರೊoದಿಗೆ ಸಂಭ್ರಮಾಚರಣೆ ಮಾಡಿದ್ದಾರೆ.
ಅಲ್ಲದೆ ಯಾವುದೇ ಪಶ್ಚಾತ್ತಾಪವಿಲ್ಲದೆ ಅಟ್ಟಹಾಸದ ವಿಡಿಯೋ, ಫೋಟೋಗಳನ್ನು ವಾಟ್ಸಾಪ್ ಸ್ಟೇಟಸ್‌ಗೆ ಹಾಕಿಕೊಂಡು ಸಂಭ್ರಮಿಸಿದ್ದರು. ಹೀಗಾಗಿ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆ ಮತ್ತು ವಿರೋಧಕ್ಕೆ ಗ್ರಾಸವಾಗಿತ್ತು. ಕಾನೂನು ಉಲ್ಲಂಘಿಸಿದವರು ಯಾರೇ ಆದ್ರೂ ಕ್ರಮ ಜರುಗಿಸಬೇಕು ಅಂತ ಜನ ಹಾಗೂ ವಿರೋಧ ಪಕ್ಷದವರು ಸಹ ಒತ್ತಾಯವಾಗಿತ್ತು.
ಫೋಟೋ ಹಾಗೂ ವಿಡಿಯೋಗಳು ವಾಟ್ಸಾಪ್ನಲ್ಲಿ ವೈರಲ್ ಆಗುತ್ತಿದ್ದಂತೆ ಹಾಗೂ ಇದಕ್ಕೆ ಜನರಿಂದ ವಿರೋಧ ಕಂಡುಬoದ ಹಿನ್ನಲೆಯಲ್ಲಿ ಇವುಗಳನ್ನು ತೆಗೆದುಹಾಕಲಾಗಿದೆ.
ಸಾರ್ವಜನಿಕವಾಗಿ ಮಾರಕಾಸ್ತ್ರಗಳನ್ನ ಹಿಡಿದು ಮೆರವಣಿಗೆ ಮಾಡಿದರು ಪೊಲೀಸ್ ಇಲಾಖೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಸಾಮಾನ್ಯ ಜನರಿಗೆ ಒಂದು ನ್ಯಾಯ ಶಾಸಕರ ಕುಟುಂಬಕ್ಕೆ ಒಂದು ನ್ಯಾಯಾನಾ ಎನ್ನುವ ಪ್ರಶ್ನೆಯನ್ನು ಸಾರ್ವಜನಿಕರು ಕೇಳುತ್ತಿದ್ದಾರೆ. ಹೀಗಾಗಿ ಸಂಬoಧಪಟ್ಟ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮಕ್ಕೆ ಮುಂದಾಗಬೇಕಾಗಿದೆ.