ಹೊಸದಿಗಂತ ವರದಿ, ವಿಜಯಪುರ:
ನಗರ ಹೊರ ವಲಯ ಅಲ್- ಅಮೀನ್ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗೆ ರ‍್ಯಾಗಿಂಗ್ ಮಾಡಿದ 5 ಜನ ಹಿರಿಯ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಇಲ್ಲಿನ ಸೈನಿಕ ಶಾಲೆ ಬಳಿಯ ಮಹಮ್ಮದ್ ಝೈನುಲ್ ಜುಲ್ಫಿಕರ್ ಅಲಿ ಕಾಸರ್ (23), ಬಳ್ಳಾರಿ ಜಿಲ್ಲೆ ಸಂಡೂರಿನ ಸಮೀರ್ ಕಾಶಿಂಪೀರ್ ತಾಡಪತ್ರಿ (24),ರಾಯಚೂರು ಜಿಲ್ಲೆಯ ಮುದಗಲ್ ದ ಶೇಕ್ ಸಾವುದ್, (23), ಬಳ್ಳಾರಿ ಜಿಲ್ಲೆ ಶಿರಗುಪ್ಪಾದ ಮನ್ಸೂರ್ ಭಾಷಾ ಖಾಜಾ ಹುಸೇನ್ (24), ಇಂಡಿ ತಾಲೂಕಿನ ಹಿಂಗಣಿಯ ಮುಝಾಫರ್ ಉರ್ಫ್ ಮುಜೀಬ್ ಜಮಾದಾರ (23) ಬಂಧಿತರು.
ಈ ಆರೋಪಿಗಳು ದ್ವಿತೀಯ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಹಮೀಮ್ ಗುಲಾಂ ಅಹ್ಮದ್ ಭಟ್ ಎಂಬವರಿಗೆ, ಕ್ರಿಕೆಟ್ ಆಟದ ಸಮಯದಲ್ಲಿ, ಮೈದಾನವನ್ನು ತೊರೆಯುವಂತೆ ಒತ್ತಾಯಿಸಿದ್ದು, ತನ್ನ ಇಚ್ಛೆಗೆ ವಿರುದ್ಧವಾಗಿ ನೃತ್ಯ ಮಾಡಲು ಹಾಗೂ ಸೆಲ್ಯೂಟ್ ಮಾಡಲು ಒತ್ತಾಯಿಸಿದ್ದು, ಅಲ್ಲದೆ ನಿಂದಿಸಿ, ಆರೋಪಿಗಳು ಹಾಸ್ಟೆಲ್ ಕೊಠಡಿಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ.
ಈ ಸಂಬಂಧ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.